ಎನ್ಐಎ ಚಾರ್ಜ್ಶೀಟ್ ಆಧಾರವಾಗಿ ಬೆಂಗಳೂರಿನಲ್ಲಿ ಇಡಿ 8 ಸ್ಥಳಗಳಲ್ಲಿ ಪರಿಶೀಲನೆ
ಬೆಂಗಳೂರು, ಜು. 21: ನಿಷೇಧಿತ ಉಗ್ರ ಸಂಘಟನೆ ಐಸಿಸ್ಗೆ ಹಣಕಾಸಿನ ನೆರವು ಹಾಗೂ ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸಿದ ಆರೋಪಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಪ್ರಕರಣದ ತನಿಖೆಯ ಅಂಗವಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ಬೆಂಗಳೂರಿನ ಎಂಟು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಯುವಕರನ್ನು ಮೂಲಭೂತವಾದದತ್ತ ಸೆಳೆಯುವ ಆರೋಪಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿರುವ ಎಂಟು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಪಿಎಂಎಲ್ಎ ಕಾಯ್ದೆಯಡಿ ತನಿಖೆ ಮುಂದುವರಿದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್ಐಆರ್ ಮತ್ತು ಚಾರ್ಜ್ಶೀಟ್ ಆಧರಿಸಿ ಇಕ್ರಾ ವೆಲ್ಫೇರ್ ಟ್ರಸ್ಟ್, ಗೈಡೆನ್ಸ್ ಫಾರ್ ಮ್ಯಾನ್ಕೈಂಡ್ (GFM) ಹಾಗೂ ಕೆಲ ವ್ಯಕ್ತಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಎನ್ಐಎ ಆರೋಪದ ಪ್ರಕಾರ, ‘ಇಕ್ರಾ ಕ್ಯಾಂಪ್’ ಹೆಸರಿನಲ್ಲಿ ವ್ಯಕ್ತಿತ್ವ ವಿಕಾಸ ಶಿಬಿರಗಳನ್ನು ಆಯೋಜಿಸಿ, ನಂತರ ‘ಕುರ್ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಕೂಟಗಳ ಮೂಲಕ ಕೆಲ ಯುವಕರನ್ನು ಗುರುತಿಸಿ ಐಸಿಸ್ ಸಿದ್ಧಾಂತದತ್ತ ಸೆಳೆಯಲು ಪ್ರಯತ್ನಿಸಲಾಗುತ್ತಿತ್ತು. ಇದಕ್ಕಾಗಿ ವೈಯಕ್ತಿಕ ಉಳಿತಾಯ, ಖಾಸಗಿ ಮೂಲಗಳು ಹಾಗೂ ಕೆಲವು ಟ್ರಸ್ಟ್ಗಳ ಮೂಲಕ ಹಣ ಸಂಗ್ರಹಿಸಿ, ಅದನ್ನು ನೇಮಕಾತಿ ಮತ್ತು ಪ್ರಯಾಣ ವೆಚ್ಚಗಳಿಗೆ ಬಳಸಲಾಗುತ್ತಿತ್ತು ಎಂಬ ಆರೋಪವಿದೆ.
ಇದೇ ಪ್ರಕರಣದಲ್ಲಿ ಬ್ರೇನ್ವಾಶ್ಗೆ ಒಳಗಾದ ಕೆಲ ಯುವಕರನ್ನು ಟರ್ಕಿ ಮಾರ್ಗವಾಗಿ ಸಿರಿಯಾಗೆ ಅಕ್ರಮವಾಗಿ ಕಳುಹಿಸಿ, ಐಸಿಸ್ ಪರ ಚಟುವಟಿಕೆಗಳಲ್ಲಿ ತೊಡಗಲು ನೆರವು ನೀಡಲಾಗಿದೆ ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಈ ಆರೋಪಗಳಿಗೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳ ಕುರಿತು ಇಡಿ ತನಿಖೆ ಮುಂದುವರಿಸಿದೆ.
