CJP ದೆಹಲಿಯಲ್ಲಿ ಪ್ರತಿಭಟನೆ ವೇಳೆ ಪೊಲೀಸರ ಲಾಠಿಚಾರ್ಜ್ ಕ್ರಮದಲ್ಲಿ ಸುಮಾರು 60 ಪ್ರತಿಭಟನಾಕಾರರು ಗಾಯಗೊಂಡಿದ್ದು, ಹಲವು ಹಿರಿಯ ಅಧಿಕಾರಿಗಳು ಸೇರಿದಂತೆ 118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ನವದೆಹಲಿ, ಜು.21: ‘ಸಂಸತ್ತಿನ ದ್ವಾರಗಳನ್ನು ಮುಚ್ಚಲಾಗಿತ್ತು. ಸಂಸದರು ಒಳಗೆ ಇದ್ದರು ಮತ್ತು ಪ್ರತಿಭಟನಾನಿರತ ‘ಗುಂಪು’ ತಮ್ಮ ಮೇಲೆ ದಾಳಿ ನಡೆಸಬಹುದು ಎಂದು ಅನೇಕರು ಆತಂಕಗೊಂಡಿದ್ದರು’ ಎಂದು ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ವೇಳೆ ಉಂಟಾದ ಉದ್ವಿಗ್ನ ಕ್ಷಣಗಳನ್ನು ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಣಾವತ್ ವಿವರಿಸಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ದೆಹಲಿ ಪೊಲೀಸರನ್ನು ಶ್ಲಾಘಿಸಿದ್ದು, ಭದ್ರತಾ ಸಿಬ್ಬಂದಿಯನ್ನು ‘ಜನರ ರಕ್ಷಾಕವಚ’ ಎಂದು ಬಣ್ಣಿಸಿದ್ದಾರೆ.
‘ಕಾಕ್ರೋಚ್ ಜನತಾ ಪಾರ್ಟಿ’ಯ ‘ಚಲೋ ಸಂಸದ್’ ಕರೆಗೆ ಓಗೊಟ್ಟು ಸಾವಿರಾರು ಜನರು ದೆಹಲಿಯ ನಗರದ ಭಾಗಕ್ಕೆ ನುಗ್ಗಿದ್ದರಿಂದ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಬೀಸಿದ ಕಲ್ಲುಗಳಿಂದ ಪೊಲೀಸರು ಏಟನ್ನು ತಿಂದರು. ಅಲ್ಲದೇ ಸಾರ್ವಜನಿಕರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು’ ಎಂದು ಕಂಗನಾ ಶ್ಲಾಘಿಸಿದರು.
ದೆಹಲಿ ಪೊಲೀಸರು ಹೇಳುವಂತೆ ಘಟನೆಯಲ್ಲಿ 60 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಹಲವು ಹಿರಿಯ ಅಧಿಕಾರಿಗಳು ಸೇರಿದಂತೆ 118ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಉದ್ದೇಶಿಸಿ ಮಾತನಾಡಿದ ಎನ್ಡಿಎ (NDA) ಸಂಸದರ ಸಭೆಯ ನಂತರ ಮಾತನಾಡಿದ ಕಂಗನಾ, ಜನಪ್ರತಿನಿಧಿಗಳು ಆತಂಕದಲ್ಲಿದ್ದರು ಮತ್ತು ಪರಿಸ್ಥಿತಿ ಉದ್ವಿಗ್ನವಾಗಿತ್ತು ಎಂದು ತಿಳಿಸಿದರು.
‘ಬಾಗಿಲುಗಳನ್ನು ಮುಚ್ಚಲಾಗಿತ್ತು, ಸಂಸದರೆಲ್ಲರನ್ನೂ ಒಳಗೆಯೇ ತಡೆಹಿಡಿಯಲಾಗಿತ್ತು ಮತ್ತು ನಮ್ಮಲ್ಲಿ ಯಾರೂ ಅಲ್ಲಿಂದ ಕದಲುವಂತಿರಲಿಲ್ಲ. ಗುಂಪು ನಮ್ಮ ಮೇಲೆ ಹೇಗೆ ದಾಳಿ ಮಾಡಲು ಯತ್ನಿಸಿತು ಎಂಬುದನ್ನು ನೀವು ನೋಡಿದ್ದೀರಿ. ಒಂದು ಹಂತದಲ್ಲಿ, ನಮ್ಮ ಮೇಲೆ ದಾಳಿ ನಡೆಯಬಹುದೇನೋ ಎಂದು ನಮ್ಮಲ್ಲಿ ಅನೇಕರು ಭಯಗೊಂಡಿದ್ದೆವು’ ಎಂದು ಅವರು ಹೇಳಿದರು.
ಸಂಸತ್ ಆವರಣದ ಹೊರಗೆ ಜನಸಂದಣಿ ಹೆಚ್ಚಾದಾಗ ಮುಖ್ಯ ದ್ವಾರಗಳನ್ನು ಮುಚ್ಚಿ ಪ್ರವೇಶ ಹಾಗೂ ನಿರ್ಗಮನವನ್ನು ಸ್ಥಗಿತಗೊಳಿಸಲಾಯಿತು; ಆ ಸಮಯದಲ್ಲಿ ಕಂಗನಾ ಮತ್ತು ಇತರ ಅನೇಕ ಸಂಸದರು ಒಳಗೆ ಇದ್ದರು.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳಿಗೆ ಹೊಣೆಗಾರಿಕೆಯನ್ನು ಆಗ್ರಹಿಸುತ್ತಿದ್ದ ಪ್ರತಿಭಟನಾಕಾರರು ಸಂಸತ್ ಸಂಕೀರ್ಣದತ್ತ ಮೆರವಣಿಗೆ ನಡೆಸಲು ಯತ್ನಿಸಿದಾಗ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ರು. ಲಾಠಿ ಪ್ರಹಾರದ ಮೂಲಕ ಪೊಲೀಸರು ಅವರನ್ನು ಹಿಮ್ಮೆಟ್ಟಿಸಿದರು.
