ದೇವನಹಳ್ಳಿ :- ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಹೆಚ್ಚಾಗ್ತಿದೆ ಲಂಚಾವತಾರ. ಹೌದು ಒಂದು ಹೆರಿಗೆಗೆ ಸಾವಿರಾರೂ ರೂಪಾಯಿ ಫಿಕ್ಸ್ ಮಾಡಿದ್ದ ಆರೋಪ ಕೇಳಿಬಂದಿದ್ದು, ಡಾಕ್ಟರ್ ಕಳ್ಳಾಟ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪ ಎದ್ದಿದೆ. ಹೆರಿಗೆ ಮಾಡಿದ ವೈದ್ಯರು 10 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರಿ ಆಸ್ಪತ್ರೆಯಾದ್ರೂ ಕೂಡ ಒಂದು ಹೆರಿಗೆ ಮಾಡಿಸಲು 10 ಸಾವಿರ ಲಂಚ ಕೇಳಿದ್ದು, ಇದೀಗ ಸಾರ್ವಜನಿಕರ ಮುಂದೆಯೇ ಲಾಕ್ ಆಗಿದ್ದಾರೆ. ಕೈಯಲ್ಲಿ ನವಜಾತ ಮಗುವನ್ನ ಹಿಡಿದು ಬಾಣಂತಿ ಕುಟುಂಬಸ್ಥರು ವೈದ್ಯರ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಒಂದು ಹೆರಿಗೆಗೆ 10 ಸಾವಿರಾಕ್ಕೆ ಡಿಮ್ಯಾಂಡ್ ಇಟ್ಟಿದ್ದ ಡಾಕ್ಟರ್..!
ಈ ಘಟನೆಯ ಪ್ರಕಾರ, ಈ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ರಾಮಚಂದ್ರ ಹೆರಿಗೆ ಮಾಡಿದ ನಂತರ ಬಾಣಂತಿ ಕುಟುಂಬದವರ ಬಳಿ 10 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕುಟುಂಬಸ್ಥರು ಮೊದಲು 5 ಸಾವಿರ ಕೊಡಲು ಹೋದಾಗ ವೈದ್ಯರು ಅದನ್ನು ಒಪ್ಪಲಿಲ್ಲ. ನಂತರ 9 ಸಾವಿರ ಕೊಡಲು ಹೋದರೂ 1 ಸಾವಿರ ಕಡಿಮೆ ಎಂದು ಹೇಳಿ ಡಾಕ್ಟರ್ ಹಣ ಪಡೆಯಲು ನಿರಾಕರಿಸಿದ್ರಂತೆ. ಅದ್ರಲ್ಲೂ ಹಣ ಕೊಡದಿದ್ರೆ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೋಗುವಂತೆ ವೈದ್ಯರು ಹೇಳಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನೊಂದ ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ನವಜಾತ ಶಿಶುವನ್ನು ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿ ಮತ್ತು ಮಗುವಿಗೆ ಏನಾದರೂ ತೊಂದರೆಯಾದ್ರೆ ನೇರ ಹೊಣೆ ಡಾ. ರಾಮಚಂದ್ರ ಎಂದು ಆರೋಪಿಸುತ್ತಿದ್ದಾರೆ.
ತೀವ್ರ ಚರ್ಚೆಗೆ ಕಾರಣವಾಗಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಹೆಚ್ಚಾಗುತ್ತಿವೆ. ಕುಟುಂಬಸ್ಥರು ಡಾ. ರಾಮಚಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಈ ವಿಷಯದಲ್ಲಿ ಗಮನ ಹರಿಸಿ ಭ್ರಷ್ಟ ವೈದ್ಯನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವೈದ್ಯರು ಹಣ ಕೇಳಿದ್ದು ನಿಜವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಲಂಚಾವತಾರ ನಡೆಯುತ್ತಿದೆ ಎಂಬ ಆರೋಪಗಳು ಹೆಚ್ಚಾಗುತ್ತಿರುವುದು ಸರ್ಕಾರಕ್ಕೆ ತಲೆನೋವುಂಟು ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಆದರೆ ಇಂತಹ ಘಟನೆಗಳು ಸರ್ಕಾರಿ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸುತ್ತವೆ. ರೋಗಿಗಳು ಮತ್ತು ಕುಟುಂಬಸ್ಥರು ಭಯ-ಭೀತಿಯಿಲ್ಲದೆ ಚಿಕಿತ್ಸೆ ಪಡೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ.

