ಕೊಡಗು, ಜು.29: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬಿಳಿಗೇರಿ ಸಮೀಪದ ಟಾಟಾ ಕಾಫಿ ತೋಟದಲ್ಲಿ ಹೃದಯವಿದ್ರಾವಕ ದುರಂತ ಸಂಭವಿಸಿದೆ. ಕೆಲಸ ಮಾಡುತ್ತಿದ್ದ ವೇಳೆ ವೇಳೆ ಏಕಾಏಕಿ ಮರ ಬಿದ್ದು ಅಸ್ಸಾಂ ಮೂಲದ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟಿದ್ದು, ಮತ್ತಿಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾದಪುರ ಸಮೀಪದ ಬಿಳಿಗೇರಿಯ ಟಾಟಾ ಕಾಫಿ ತೋಟದಲ್ಲಿ ಕೆಲಸದ ವೇಳೆ ಭಾರಿ ಗಾಳಿ ಮಳೆಗೆ ಮರವೊಂದು ಉರುಳಿ ಬಿದ್ದು ಅಸ್ಸಾಂ ಮೂಲದ ಪರ್ಬಿನಾ ಖಾತುನ್ (29), ಅಲೆಮನ್ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಕೆಲಸ ಮಾಡುತ್ತಿದ್ದ ಇನ್ನಿಬ್ಬರು ಕಾರ್ಮಿಕರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಸೋಮವಾರಪೇಟೆ ಪೊಲೀಸರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.
