Footpath teravu: ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು. ಅವರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಂಡು, ಅವರಿಗೆ ಅಗತ್ಯವಾದ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲವನ್ನು ಸರ್ಕಾರ ಒದಗಿಸಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ಬೆಂಗಳೂರು, ಆ.06: ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಅನ್ಯಾಯಗಳನ್ನು ನೋಡಿದಾಗ, 1976ರಲ್ಲಿ ದೆಹಲಿಯಲ್ಲಿ ನಡೆದ ತುರ್ಕ್ಮನ್ ಗೇಟ್ ಘಟನೆಯ ನೆನಪು ಬರುತ್ತದೆ. ಈ ರೀತಿ ಘಟನೆಯನ್ನು ಸಂಸದ ಗೋವಿಂದ ಕಾರಜೋಳ ಖಂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅಂದಿನ ಪ್ರಧಾನಮಂತ್ರಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿಯವರ ಸುಪುತ್ರ ಸಂಜಯ್ ಗಾಂಧಿಯವರು ಸುಮಾರು 25,000 ಮನೆಗಳನ್ನು ಬುಲ್ಡೋಜರ್ಗಳ ಮೂಲಕ ತೆರವುಗೊಳಿಸಿ ಲಕ್ಷಾಂತರ ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿದ್ದರು. ಆ ಸಂದರ್ಭದಲ್ಲಿ ನಡೆದ ಅನ್ಯಾಯವನ್ನು ದೇಶ ಎಂದಿಗೂ ಮರೆತಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ದೌರ್ಜನ್ಯವೂ ಅದೇ ರೀತಿಯ ನೋವನ್ನು ಉಂಟುಮಾಡುತ್ತಿದೆ. ಬಡವರ ಜೀವನೋಪಾಯದ ಮೇಲೆಯೇ ಹೊಡೆತ ನೀಡಲಾಗಿದೆ. ಸುಮಾರು 2.5 ಲಕ್ಷ ಕುಟುಂಬಗಳ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಅಂದಾಜು 10 ಲಕ್ಷ ಜನರ ಬದುಕಿನ ಆಧಾರವನ್ನು ಕಸಿದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ಗೆ ಮತ ಬೇಕಾದಾಗ ಮಾತ್ರ ದೀನದಲಿತರು, ಬಡವರು ಮತ್ತು ಹಿಂದುಳಿದ ವರ್ಗದ ಜನರು ನೆನಪಾಗುತ್ತಾರೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು.
ಕರ್ನಾಟಕದಲ್ಲಿಯೂ ಪಿಎಂ ಸ್ವನಿಧಿ ಯೋಜನೆಯಡಿ ಸುಮಾರು ಮೂರು ಲಕ್ಷ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಇದಲ್ಲದೆ, ಮೋದಿ ಸರ್ಕಾರ ಬೀದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಸಹ ಒದಗಿಸುತ್ತಿದೆ. ಈ ವ್ಯಾಪಾರಿಗಳಲ್ಲಿ ಸುಮಾರು 50 ಶೇಕಡಾ ಜನರು ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದರು.
ಇದೇ ರೀತಿಯ ದೌರ್ಜನ್ಯ ಮುಂದುವರಿದರೆ, ದೀನದಲಿತರು, ಬಡವರು ಮತ್ತು ಶ್ರಮಜೀವಿಗಳು ಪ್ರಜಾಪ್ರಭುತ್ವದ ಮೂಲಕ ನಿಮಗೆ ಸೂಕ್ತ ಉತ್ತರ ನೀಡಲಿದ್ದಾರೆ.
ಆದ್ದರಿಂದ, ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು. ಅವರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಂಡು, ಅವರಿಗೆ ಅಗತ್ಯವಾದ ಆರ್ಥಿಕ ಮತ್ತು ಆಡಳಿತಾತ್ಮಕ ಬೆಂಬಲವನ್ನು ಸರ್ಕಾರ ಒದಗಿಸಬೇಕು ಎಂದು ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
