EARTHQUKE: ಬೊಗೋಟಾದ ಪಶ್ಚಿಮಕ್ಕೆ ಸುಮಾರು 250 ಮೈಲು(400 ಕಿಲೋಮೀಟರ್) ದೂರದಲ್ಲಿರುವ ಚೋಕೊ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, 132ಕ್ಕೂ ಹೆಚ್ಚು ಜನರ ಮೃತಪಟ್ಟಿದ್ದಾರೆ. ಸುಮಾರು 4,800 ಜನರಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮರ್ನಲ್ಲಿ ಭೂಕಂಪದ ಕೇಂದ್ರಬಿಂದು ಎಂದು ಪತ್ತೆಯಾಗಿದೆ.
ಬೊಗೋಟಾ, ಆ.11: ದಕ್ಷಿಣ ಅಮೆರಿಕಾದ ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 130ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವು ಕಟ್ಟಡಗಳು ಕುಸಿದಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿ, ಹಲವರು ಗಾಯಗೊಂಡಿದ್ದಾರೆ.
ಕೊಲಂಬಿಯಾದ ರಾಜಧಾನಿ ಬೊಗೋಟಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಇಂದು ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಬೊಗೋಟಾದ ಪಶ್ಚಿಮಕ್ಕೆ ಸುಮಾರು 250 ಮೈಲು(400 ಕಿಲೋಮೀಟರ್) ದೂರದಲ್ಲಿರುವ ಚೋಕೊ ಪ್ರದೇಶದಲ್ಲಿ ಸುಮಾರು 4,800 ಜನರಿರುವ ಸ್ಯಾನ್ ಜೋಸ್ ಡೆಲ್ ಪಾಲ್ಮರ್ನಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ ಎಂದು ಅಮೆರಿಕದ ಮತ್ತು ಕೊಲಂಬಿಯಾದ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ ವರದಿ ಮಾಡಿದೆ.
ಈಕ್ವೆಡಾರ್ನಲ್ಲಿಯೂ ಭೂಕಂಪದ ಅನುಭವವಾಗಿದ್ದು, ಪಶ್ಚಿಮ ನಗರವಾದ ಪೆರೇರಾದಲ್ಲಿ ಈ ಭೂಕಂಪದಲ್ಲಿ ಕನಿಷ್ಠ 18 ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭೂಕಂಪದಿಂದಾಗಿ ಕನಿಷ್ಠ 20 ಕಟ್ಟಡಗಳು ಕುಸಿದಿವೆ. ನೆರೆಯ ಚೋಕೊ ಪ್ರಾಂತ್ಯದಲ್ಲಿ ಭೂಕಂಪದ ನಂತರ “ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ” ಎಂದು ಸಲಾಜರ್ ಅವರು, ಕ್ಯಾರಕೋಲ್ ರೇಡಿಯೊಗೆ ತಿಳಿಸಿದ್ದಾರೆ.
ಭೂಕಂಪ ಸಂಭವಿಸುತ್ತಿದ್ದಂತೆ ಮನೆ, ಕಟ್ಟಡಗಳಿಂದ ಜನರು ಹೊರ ಓಡಿ ಬಂದಿದ್ದಾರೆ. ಕೆಲವರು ಮಾಲ್ಗಳಲ್ಲಿ ಸಿಲುಕಿದ್ದಾರೆ. ತಮ್ಮ ಕಣ್ಣೆದುರೇ ತಮ್ಮ ಮನೆ, ಅಪಾರ್ಟ್ಮೆಂಟ್ಗಳು ಉರುಳುತ್ತಿರುವುದನ್ನು ಕಂಡು ಬಹಳಷ್ಟು ಮಂದಿ ಕಣ್ಣೀರಾಕಿದ್ದಾರೆ. ಸ್ಯಾನ್ ಜೋಸ್ ಡೆಲ್ ಪಾಲ್ಮಾರ್ನಿಂದ 120 ಕಿ.ಮೀ ದೂರದಲ್ಲಿರುವ ಮನಿಜಾಲೆಸ್ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟಡಗಳು ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
