ಬೆಂಗಳೂರು, ಆ. 11: ಕಾವೇರಿ ಜಲವಿವಾದ ಸಂಬಂಧ ಕನ್ನಡಪರ ಸಂಘಟನೆಗಳು ಗುರುವಾರ, ಅಂದರೆ ಆಗಸ್ಟ್ 13ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಆರಂಭದಲ್ಲಿ ಬೆಂಬಲ ಸೂಚಿಸಿದ್ದ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘಟನೆ (ಕ್ಯಾಮ್ಸ್) ಈಗ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಕೇವಲ ನೈತಿಕ ಬೆಂಬಲ ನೀಡಲು ಮುಂದಾಗಿದೆ. ಹೀಗಾಗಿ ಅಂದು ಬೆಂಗಳೂರಿನ ಖಾಸಗಿ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಕ್ಯಾಮ್ಸ್ ಸ್ಪಷ್ಟಪಡಿಸಿದೆ.
ಮಕ್ಕಳ ಹಿತದೃಷ್ಟಿಯಿಂದ ಬಂದ್ಗೆ ಬೆಂಬಲದಿಂದ ಹಿಂದೆ ಸರಿಯಲಾಗಿದೆ. ಶಿಕ್ಷಕರು ಮತ್ತು ಸಿಬ್ಬಂದಿ ಕಪ್ಪು ಪಟ್ಟಿ ಧರಿಸುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂದು ಕ್ಯಾಮ್ಸ್ ತಿಳಿಸಿದೆ. ಬಂದ್ ಮುಂದುವರಿದರೆ ಶಾಲೆಗಳಲ್ಲಿ ಮಕ್ಕಳು, ಶಿಕ್ಷಕರು ಸೇರಿದಂತೆ ಎಲ್ಲರೂ ನೈತಿಕ ಬೆಂಬಲ ಸೂಚಿಸುತ್ತೇವೆ. ಕಾವೇರಿ ನದಿ ನೀರಿನ ವಿಚಾರವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದೆ
