CWRC: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಮತ್ತೆ ಆಘಾತ ನೀಡಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸು ಮಾಡಿದೆ. ರಾಜ್ಯದಲ್ಲಿ ಬರಸ್ಥಿತಿ ಇರುವಾಗ ನೀರು ಬಿಡಲು ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಸಿವ ಸಂಬಂಧ ಈ ಹಿಂದೆ CWMA ನೀಡಿದ್ದ ಆದೇಶವನ್ನು ಸಂಕಷ್ಟದ ಸಮಯದಲ್ಲಿಯೂ ಕರ್ನಾಟಕ ಸರ್ಕಾರ ಪಾಲನೆ ಮಾಡಿದೆ. 15 ದಿನಗಳಲ್ಲಿ 4.5 ಟಿಎಂಸಿ ನೀರು ಹರಿಸುವಂತೆ ತಿಳಿಸಿದ್ದ ಹಿನ್ನೆಲೆ ಕಳೆದ 15 ದಿನಗಳಲ್ಲಿ ಅದಕ್ಕಿಂತಲೂ ಹೆಚ್ಚು ನೀರು ಹರಿಸಲಾಗಿದೆ.
ಬೆಂಗಳೂರು, ಆ.11: ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತೆ ಕರ್ನಾಟಕಕ್ಕೆ ಶಾಕ್ ನೀಡಿದ್ದು, ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಶಿಫಾರಸ್ಸು ಮಾಡಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಕರ್ನಾಟಕದಲ್ಲಿಯೇ ತೀವ್ರ ಬರಸ್ಥಿತಿಯ ನಡುವೆ ಈ ಹಿಂದೆ ಕೂಡ ನೀರು ಹರಿಸಲು CWMA ಆದೇಶ ನೀಡಿತ್ತು.
ತೀವ್ರ ಅಸಮಾಧಾನ
ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯ ತೀರ್ಮಾನ ಸಂಬಂಧ ರಾಜ್ಯದ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ್ಕದಲ್ಲಿಯೇ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಇಲ್ಲಿಯೇ ಸಂಕಷ್ಟದ ಸ್ಥಿತಿಯಲ್ಲಿ ಜನರಿರುವಾಗ ನಿತ್ಯ 1 ಟಿಎಂಸಿ ನೀರು ಹರಿಸಿ ಅಂದರೆ ಹೇಗೆ? ಇಷ್ಟು ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಅಸಮಧಾನ ಹೊರಹಾಕಿದ್ದಾರೆ.
ಕರ್ನಾಟಕದ 4 ಕಾವೇರಿ ಜಲಾಶಯಗಳಿಗೆ ಒಳಹರಿವು 77.74 TMC ಮಾತ್ರವಿದ್ದು, ಇದು 30 ವರ್ಷಗಳ ಸರಾಸರಿಗಿಂತ ಶೇ.47ರಷ್ಟು ಕಡಿಮೆ. ಬಿಳಿಗುಂಡ್ಲುವಿನಲ್ಲಿ ಆಗಸ್ಟ್ 10ರ ವರೆಗೆ 86,942 ಕ್ಯೂಸೆಕ್ ನೀರು ಹರಿದುಬಂದಿದ್ದು, ನಿಗದಿತ 52,500 ಕ್ಯೂಸೆಕ್ಗಿಂತ ಹೆಚ್ಚಾಗಿದೆ. ಮಳೆ ಕೊರತೆ ಮತ್ತು ಒಳಹರಿವಿನ ಅನಿಶ್ಚಿತತೆಯಿಂದಾಗಿ ಮುಂದೆ ಹೆಚ್ಚುವರಿ ನೀರು ಬಿಡಲು ಸಾಧ್ಯವಿಲ್ಲ. ಕುಡಿಯುವ ನೀರು, ಅಗತ್ಯ ಬಳಕೆ ಮತ್ತು ಕೃಷಿಗಾಗಿ ಲಭ್ಯವಿರುವ ಜಲಸಂಗ್ರಹವನ್ನು ಸಂರಕ್ಷಿಸಬೇಕಾಗಿದೆ. ನೀರು ಹಂಚಿಕೆ ವೇಳೆ ಕಠಿಣ ಪ್ರಮಾಣಾನುಪಾತದ ಸೂತ್ರಕ್ಕಿಂತ ವಾಸ್ತವಿಕ ಮಳೆ, ಒಳಹರಿವು ಮತ್ತು ಹವಾಮಾನ ಪರಿಸ್ಥಿತಿಯನ್ನು ಪರಿಗಣಿಸಬೇಕು. ಪ್ರಸ್ತುತ ಹೆಚ್ಚುವರಿ ನೀರು ಬಿಡುಗಡೆ ಕುರಿತು ನಿರ್ಧಾರ ಕೈಗೊಳ್ಳದೆ, ಮುಂಗಾರು ಪರಿಸ್ಥಿತಿ ಮತ್ತು ಜಲಾಶಯಗಳ ಮಟ್ಟವನ್ನು ಗಮನಿಸಿ ನಂತರ ಮರುಪರಿಶೀಲಿಸಬೇಕು ಎಂದು ಕರ್ನಾಟಕ ವಾದಿಸಿತ್ತು.
ತಮಿಳುನಾಡು ವಾದ ಹೇಗಿತ್ತು?
ಜುಲೈ 29ರಿಂದ ಆ.12ರವರೆಗೆ 3,500 ಕ್ಯೂಸೆಕ್ ನೀರು ಬಿಡುವ ಹಿಂದಿನ ನಿರ್ದೇಶನ ಪರಿಷ್ಕರಿಸಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ. ಕೆಆರ್ಎಸ್ ಜಲಾಶಯ & ಕಬಿನಿ ಜಲಾಶಯದಿಂದ ನೀರು ಬಿಡುವ ಮೂಲಕ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿನ ಪಾಲು ತಲುಪುವಂತೆ ಮಾಡಬೇಕು. ಆಗಸ್ಟ್ 12ರ ವೇಳೆಗೆ ಕರ್ನಾಟಕ ಬಿಡಬೇಕಾದ 21.357 TMC ನೀರು ಬಾಕಿ ಉಳಿಯಲಿದೆ. ಆಗಸ್ಟ್ 13ರಿಂದ 31ರವರೆಗೆ ಪ್ರಮಾಣಾನುಪಾತದಂತೆ ನೀಡಬೇಕಿರುವ 15.278 ಟಿಎಂಸಿ ನೀರಿನ ಜೊತೆಗೆ ಬಾಕಿಯನ್ನೂ ಬಿಡಬೇಕು. ಆಗಸ್ಟ್ ಅಂತ್ಯದ ವೇಳೆಗೆ ಬಿಳಿಗುಂಡ್ಲುವಿನಲ್ಲಿ 36.472 TMC ಅಥವಾ ಸುಮಾರು 37 TMC ನೀರು ಖಚಿತಪಡಿಸಬೇಕು ಎಂದು ತಮಿಳುನಾಡು ವಾದಿಸಿತ್ತು.
ಮೇಲ್ಮನವಿ ಸಲ್ಲಿಸಲು ತೀರ್ಮಾನ
ತಮಿಳುನಾಡಿಗೆ ಮತ್ತೆ ನೀರು ಬಿಡಲು CWRC ಶಿಫಾರಸು ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ತೀರ್ಮಾನಿಸಿದೆ. ಕರ್ನಾಟಕ ರಾಜ್ಯಕ್ಕೆ ಮತ್ತೆ ಮುಂಗಾರು ಮಳೆ ಬರಲು ಸಾಧ್ಯವಿಲ್ಲ. ಈ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆ ಆಗುವ ನಿರೀಕ್ಷೆ ಇದೆ. ಆದರೆ ತಮಿಳುನಾಡಿಗೆ ಮತ್ತೆ ಹಿಂಗಾರು ಮಳೆ ಬರಲಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ ನಮ್ಮ ವ್ಯವಸಾಯಕ್ಕೆ ನೀರು ಇರಲ್ಲ. ಹೀಗಾಗಿ 12 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಮೇಲ್ಮನವಿ ಸಲ್ಲಿಸಿ ವಾದ ಮಂಡಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
