Pan gutka banned: ಪಾನ್ ಮಸಾಲಾದೊಂದಿಗೆ ಮಿಶ್ರಣ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.
/rising-kashmir/media/media_files/2026/06/19/image-49-2026-06-19-08-29-35.png)
ರಾಜ್ಯಾದ್ಯಂತ ಗುಟ್ಕಾ ಹಾಗೂ ತಂಬಾಕು ಅಥವಾ ನಿಕೋಟಿನ್ ಒಳಗೊಂಡ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿದ್ದು, ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ದಾಸ್ತಾನು, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಆಯುಕ್ತರು ನಿಷೇಧಿಸಿದ್ದಾರೆ.
ಪಾನ್ ಮಸಾಲಾದೊಂದಿಗೆ ಮಿಶ್ರಣ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಮಾರಾಟ ಮಾಡುವ ತಂಬಾಕು ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.
ಈ ಕ್ರಮದಿಂದ ರಾಜ್ಯಾದ್ಯಂತ ಇಂತಹ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಒಂದು ವರ್ಷದ ಮಟ್ಟಿಗೆ ಸಂಪೂರ್ಣ ತಡೆ ಬೀಳಲಿದೆ. ಆದೇಶ ಉಲ್ಲಂಘಿಸುವ ತಯಾರಕರು, ವಿತರಕರು, ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುವ ನಿರೀಕ್ಷೆಯಿದೆ.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾದ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಬಳಕೆಯನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು
“ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006ರ ಸೆಕ್ಷನ್ 30(2)(ಎ) ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟದ ಮೇಲಿನ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿ, 2011ರ ನಿಯಮ 2.3.4ರ ಅಡಿಯಲ್ಲಿ ನೀಡಲಾಗಿರುವ ಅಧಿಕಾರವನ್ನು ಚಲಾಯಿಸಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ 10-08-2026ರಂದು ಸರ್ಕಾರದ ಅಧಿಸೂಚನೆ ಹೊರಡಿಸಿದೆ” ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಯನ್ನು ಈ ಅಧಿಸೂಚನೆಯ ಮೂಲಕ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಷೇಧಿತ ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ತಯಾರಿಕೆ, ಮಾರಾಟ ಅಥವಾ ವಿತರಣೆ ನಡೆಯುತ್ತಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಹಾಗೂ ಆರೋಗ್ಯಕರ ಮತ್ತು ವ್ಯಸನಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಹಕರಿಸುವಂತೆ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
