IND vs SL; Sri Lanka Squad Announced for 1st Test: ಭಾರತ ಮತ್ತು ಶ್ರೀಲಂಕಾ ನಡುವಿನ ಆಗಸ್ಟ್ 15 ರಿಂದ ಟೆಸ್ಟ್ ಸರಣಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯಕ್ಕೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಧನಂಜಯ ಡಿ ಸಿಲ್ವಾ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಮೂರು ವರ್ಷಗಳ ನಂತರ ನಿರೋಷನ್ ಡಿಕ್ವೆಲ್ಲಾ ವಾಪಸ್ ಆಗಿದ್ದರೆ, ಪಸಿಂದು ಸೂರ್ಯಬಂಡಾರ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಐವರು ಸ್ಪಿನ್ನರ್ಗಳು ಮತ್ತು ಅಭ್ಯಾಸ ಪಂದ್ಯದಲ್ಲಿ ಮಿಂಚಿದ ನಿಶಾನ್ ಮದುಷ್ಕ ತಂಡದಲ್ಲಿದ್ದಾರೆ.
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಇನ್ನು ಮೂರು ದಿನಗಳಲ್ಲಿ ಅಂದರೆ ಆಗಸ್ಟ್ 15 ರಿಂದ ಪ್ರಾರಂಭವಾಗಲಿದೆ. ಈ ಸರಣಿಗಾಗಿ ಈಗಾಗಲೇ ಟೀಂ ಇಂಡಿಯಾ ಶ್ರೀಲಂಕಾದಲ್ಲಿದೆ. ಶುಭ್ಮನ್ ಗಿಲ್ ನಾಯಕತ್ವದ 15 ಸದಸ್ಯರ ತಂಡವನ್ನು ಬಿಸಿಸಿಐ ಎರಡು ವಾರಗಳ ಮೊದಲೇ ಪ್ರಕಟಿಸಿತ್ತು. ಇದೀಗ ಉಭಯ ತಂಡಗಳ ನಡುವೆ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಧನಂಜಯ ಡಿ ಸಿಲ್ವಾ ತಂಡವನ್ನು ಮುನ್ನಡೆಸಲಿದ್ದು, ಕಾಮಿಂದು ಮೆಂಡಿಸ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.
ಅನುಭವಿಗಳಿಗೆ ಸ್ಥಾನ
ಬರೋಬ್ಬರಿ 3 ವರ್ಷಗಳ ನಂತರ ನಿರೋಷನ್ ಡಿಕ್ವೆಲ್ಲಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಕುಸಲ್ ಮೆಂಡಿಸ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ಅವರು ವಹಿಸಿಕೊಳ್ಳಲಿದ್ದಾರೆ. ಕೊನೆಯ ಬಾರಿಗೆ 2023 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿದ್ದ ನಿರೋಷನ್ ಡಿಕ್ವೆಲ್ಲಾಗೆ ಕೊನೆಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ. ಹಾಗೆಯೇ ಬ್ಯಾಟ್ಸ್ಮನ್ ಪಸಿಂದು ಸೂರ್ಯಬಂಡಾರ ಅವರನ್ನು ಮೊದಲ ಬಾರಿಗೆ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅನುಭವಿ ಆಟಗಾರ ದಿನೇಶ್ ಚಾಂಡಿಮಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಗಾಲೆ ಟೆಸ್ಟ್ ಪಂದ್ಯಕ್ಕೆ ತಂಡ: ಧನಂಜಯ ಡಿ ಸಿಲ್ವ(ನಾಯಕ), ಲಹಿರು ಉದಾನ, ನಿಶಾನ್ ಮದುಷ್ಕ, ಕಮಿಂದು ಮೆಂಡಿಸ್, ದಿನೇಶ್ ಚಾಂಡಿಮಲ್, ಪಸಿಂದು ಸೂರಿಯಬಂಡಾರ, ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ, ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಕೇಶರ ನುವಂತ, ಮಿಲನ್ ರತ್ನಾಯಕೆ, ಅಸಿತ ಫೆರ್ನಾಂಡೋ, ಲಹಿರು ಕುಮಾರ, ವಿಶ್ವ ಫೆರ್ನಾಂಡೋ, ದಿಲ್ಶನ್ ಮಧುಶಂಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
