UTTARAKHAND TUNNEL COLLAPSE: ಅಲಕನಂದಾ ನದಿಯ ಮೇಲಿನ ನಿರ್ಮಾಣ ಹಂತದಲ್ಲಿರುವ ವಿಷ್ಣುಗಾಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್ ಟನಲ್ (TRT)ನಲ್ಲಿ ಚಮೋಲಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ; 7 ಕಾರ್ಮಿಕರು ಸಾವು, 14 ಜನರಿಗೆ ಗಾಯ, 22 ಮಂದಿ ರಕ್ಷಣೆ ಮಾಡಲಾಗಿದೆ.
![]()
ಚಮೋಲಿ(ಉತ್ತರಾಖಂಡ), ಆ.14: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಸಮೀಪದ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಟೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)ನ ಸುರಂಗದೊಳಗೆ ಭಾರಿ ಭೂಕುಸಿತದಿಂದ ಮತ್ತು ನೀರು ತುಂಬಿಕೊಂಡ ಪರಿಣಾಮ ಕನಿಷ್ಠ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ.
ಅಲಕನಂದಾ ನದಿಯ ಮೇಲಿನ ನಿರ್ಮಾಣ ಹಂತದಲ್ಲಿರುವ ವಿಷ್ಣುಗಾಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್ ಟನಲ್ (TRT)ನಲ್ಲಿ ನಿನ್ನೆ ಗುರುವಾರ ಸಾಯಂಕಾಲ ಈ ಘಟನೆ ಸಂಭವಿಸಿದೆ. ಕಾರ್ಮಿಕರು ಸುರಂಗದೊಳಗೆ ಬಲವರ್ಧಕ ಕಬ್ಬಿಣದ ಸರಳುಗಳನ್ನು ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಭೂಕುಸಿತ ಸಂಭವಿಸಿದ್ದು, ಭಾರಿ ಪ್ರಮಾಣದ ಅವಶೇಷಗಳು ಹಾಗೂ ನೀರು ಸುರಂಗದೊಳಗೆ ನುಗ್ಗಿ ಹಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಸುರಂಗದೊಳಗೆ ಸಿಲುಕಿಕೊಂಡಿದ್ದ 28 ಕಾರ್ಮಿಕರ ಪೈಕಿ 22 ಕಾರ್ಮಿಕರನ್ನು ಹೊರಗೆ ಕರೆತಂದಿದ್ದು, ಅವರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ರಕ್ಷಿಸಲ್ಪಟ್ಟ ಕಾರ್ಮಿಕರ ಪೈಕಿ 11 ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಕಾರ್ಮಿಕರನ್ನು ಪಿಪಲ್ಕೋಟಿಯ ವಿವೇಕಾನಂದ ಚಾರಿಟೇಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸುರಂಗದೊಳಗೆ ಇನ್ನೂ ಸಿಲುಕಿಕೊಂಡಿರುವ ಆರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಎನ್ಡಿಆರ್ಎಫ್ (NDRF) ಮತ್ತು ಎಸ್ಡಿಆರ್ಎಫ್ (SDRF) ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸುರಂಗದೊಳಗೆ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು, ಅಪಘಾತ ಸಂಭವಿಸಿದಾಗ ಸುರಂಗದೊಳಗೆ ಸುಮಾರು 20ರಿಂದ 22 ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು. ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದ ಬಳಿಕ ಸುರಂಗದೊಳಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿದ್ದು, ಸುರಂಗದ ಬದಿಗಳಿಂದಲೂ ನೀರು ಸೋರಿಕೆಯಾಗುತ್ತಿದೆ ಎಂದು ಎನ್ಡಿಆರ್ಎಫ್ ತಂಡದ ಕಮಾಂಡರ್ ಅಮೃತ್ ಲಾಲ್ ಮೀನಾ ತಿಳಿಸಿದ್ದಾರೆ.
ರಕ್ಷಣಾ ಸಿಬ್ಬಂದಿ ವಿಶೇಷ ಉಪಕರಣಗಳನ್ನು ಬಳಸಿ ಸುರಂಗದ ಅಪಾಯಕ್ಕೊಳಗಾದ ಭಾಗವನ್ನು ಪ್ರವೇಶಿಸಿ ಕಾರ್ಮಿಕರು ಹಾಗೂ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಸಿಲುಕಿರುವವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.
ಈ ನಡುವೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಅವರು ಸುರಂಗ ಅಪಘಾತದಲ್ಲಿ ಸಿಲುಕಿರುವ ಜಾರ್ಖಂಡ್ ಮತ್ತು ಛತ್ತೀಸ್ಗಢದ ಕಾರ್ಮಿಕರ ಸ್ಥಿತಿಗತಿ ಕುರಿತು ಆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
