National Teachers Award: ‘ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್’ನ ಜೀವಶಾಸ್ತ್ರ (ಬಯಾಲಜಿ) ಶಿಕ್ಷಕಿ ಹಾಗೂ ವಿಭಾಗೀಯ ಮುಖ್ಯಸ್ಥೆಯಾದ ರಾಧಾ ರಾಜೇಶ್ ಅವರು 2026ರ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಇವರು ಈ ದಿವ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬೆಂಗಳೂರು, ಸೆ.5: ಇಂದಿರಾನಗರದ ‘ನ್ಯೂ ಹೊರೈಜನ್ ಪಬ್ಲಿಕ್ ಸ್ಕೂಲ್’ನ ಜೀವಶಾಸ್ತ್ರ (ಬಯಾಲಜಿ) ಶಿಕ್ಷಕಿ ಹಾಗೂ ವಿಭಾಗೀಯ ಮುಖ್ಯಸ್ಥೆಯಾದ ರಾಧಾ ರಾಜೇಶ್ ಅವರು 2026ರ ಸಾಲಿನ ಪ್ರತಿಷ್ಠಿತ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು (ಸೆಪ್ಟೆಂಬರ್ 5)ರ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಇವರು ಈ ದಿವ್ಯ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಬಾರಿ ದೇಶಾದ್ಯಂತ ಆಯ್ಕೆಯಾದ ಒಟ್ಟು 48 ಅತ್ಯುತ್ತಮ ಶಿಕ್ಷಕರಲ್ಲಿ ಸಿಐಎಸ್ಸಿಇ (CISCE) ಮಂಡಳಿಯನ್ನು ಪ್ರತಿನಿಧಿಸಿದ ಏಕೈಕ ಶಿಕ್ಷಕಿ ರಾಧಾ ರಾಜೇಶ್.
ಕೇವಲ ಪಠ್ಯಪುಸ್ತಕದ ಸಿದ್ಧಾಂತಗಳ ಹೊರತಾಗಿ ವಿಷಯಗಳನ್ನು ನೈಜ ಜೀವನದ ಪ್ರಸಿದ್ಧ ಉದಾಹರಣೆಗಳೊಂದಿಗೆ ಜೋಡಿಸಿ ಬೋಧಿಸುವುದು ರಾಧಾ ರಾಜೇಶ್ ಅವರ ವಿಶೇಷತೆ. ಪಿಟ್ಯುಟರಿ ಗ್ರಂಥಿ ಮತ್ತು ‘ಗ್ರೋತ್ ಹಾರ್ಮೋನ್’ ಬಗ್ಗೆ ವಿವರಿಸುವಾಗ ವಿಶ್ವಪ್ರಸಿದ್ಧ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಬಾಲ್ಯದಲ್ಲಿ ಎದುರಿಸಿದ್ದ ಗ್ರೋತ್ ಹಾರ್ಮೋನ್ ಕೊರತೆಯ ಕಥೆಯನ್ನು ವಿದ್ಯಾರ್ಥಿಗಳಿಗೆ ವಿವರಿಸುತ್ತಾರೆ. ಮಿದುಳಿನ ಗಾಯಗಳು ಮತ್ತು ನರಮಂಡಲದ ಕುರಿತು ಪಾಠ ಮಾಡುವಾಗ ಕಾರು ರೇಸಿಂಗ್ ಚಾಂಪಿಯನ್ ಮೈಕೆಲ್ ಶೂಮೇಕರ್ ಅನುಭವಿಸಿದ ಸ್ಕೀಯಿಂಗ್ ಅಪಘಾತದ ಪ್ರಸಂಗವನ್ನು ಉದಾಹರಿಸುತ್ತಾರೆ. ಇನ್ನು ನರಕೋಶಗಳ ಸಂಪರ್ಕ ವಿವರಿಸಲು ತಮ್ಮ ತಂದೆಗೆ ಇದ್ದ ಪಾರ್ಕಿನ್ಸನ್ ಕಾಯಿಲೆಯ ಅನುಭವವನ್ನು ಹಂಚಿಕೊಳ್ಳುವ ಮೂಲಕ ವಿಜ್ಞಾನವನ್ನು ಜೀವಂತಗೊಳಿಸುತ್ತಾರೆ.
ತಂತ್ರಜ್ಞಾನದ ಸೃಜನಶೀಲ ಬಳಕೆ:
ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅತ್ಯಂತ ಸಮರ್ಥವಾಗಿ ಅಳವಡಿಸಿಕೊಂಡಿರುವ ರಾಧಾ ರಾಜೇಶ್, ವರ್ಚುವಲ್ ಲ್ಯಾಬ್ಗಳು, 3D ಸಿಮ್ಯುಲೇಶನ್ಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ಕಲಿಕಾ ಪರಿಕರಗಳನ್ನು ಬಳಸುತ್ತಾರೆ. ಇಷ್ಟೇ ಅಲ್ಲದೆ ‘ರಾಧಾ ರಾಜೇಶ್ – ಬಯಾಲಜಿ ಬಿಯಾಂಡ್ ದಿ ಕ್ಲಾಸ್ರೂಮ್’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ತರಗತಿಯ ಆಚೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಸುಲಭ ರೀತಿಯಲ್ಲಿ ಜೀವಶಾಸ್ತ್ರ ಬೋಧಿಸುತ್ತಿದ್ದಾರೆ. ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಪ್ರಶ್ನಿಸುವ ಮತ್ತು ತಾರ್ಕಿಕವಾಗಿ ಆಲೋಚಿಸುವ ಸಾಮರ್ಥ್ಯ ಹೆಚ್ಚಿಸಲು ಬಳಸಬೇಕೇ ಹೊರತು, ಸ್ವತಂತ್ರ ಚಿಂತನೆಯನ್ನು ಬಿಡಲು ಅಲ್ಲ ಎಂಬುದು ಇವರ ಸಿದ್ಧಾಂತವಾಗಿದೆ.
