Navratri 2026: Women are banned from entering this temple during Navratri! Why this strict 10-day celebration? – ನವರಾತ್ರಿಯಲ್ಲಿ ಮಹಿಳೆಯರು ಕಠಿಣವಾದ ವ್ರತ-ಉಪವಾಸಗಳನ್ನು ಮಾಡುತ್ತಾರೆ. ದೇವಸ್ಥಾನಗಳಿಗೆ ಹೋಗಿ ತಾಯಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ, ಈ ಪವಿತ್ರ ಸಮಯದಲ್ಲಿ ಇಲ್ಲೊಂದು ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ.
ನವರಾತ್ರಿ ಶುರುವಾದಾಗ ದೇಶದ ಎಲ್ಲ ಕಡೆ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಈ ಪವಿತ್ರ ಸಮಯದಲ್ಲಿ ಅನೇಕ ಮಹಿಳೆಯರು ಕಠಿಣವಾದ ವ್ರತ-ಉಪವಾಸಗಳನ್ನು ಮಾಡುತ್ತಾರೆ. ದೇವಸ್ಥಾನಗಳಿಗೆ ಹೋಗಿ ತಾಯಿ ದೇವಿಗೆ ಪೂಜೆ ಸಲ್ಲಿಸುತ್ತಾರೆ. ರಾತ್ರಿಯಿಡೀ ಜಾಗರಣೆ, ನೈವೇದ್ಯ ಮತ್ತು ಭಕ್ತಿಗೀತೆಗಳ ಮೂಲಕ ಅವರು ದೇವಿಯ ಅನುಗ್ರಹವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಆದರೆ ಈ ಭಕ್ತಿ ಕೆಲಸಗಳ ನಡುವೆ ಒಂದು ವಿಚಿತ್ರ ಸಂಪ್ರದಾಯವೂ ಇದೆ. ಅದು ಅನೇಕ ಜನರನ್ನು ಆಶ್ಚರ್ಯಗೊಳಿಸುತ್ತದೆ.
ಹೌದು, ಬಿಹಾರದ ಒಂದು ಪ್ರಸಿದ್ಧ ದೇವಸ್ಥಾನದಲ್ಲಿ ನವರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಒಳಗೆ ಹೋಗಲು ಅವಕಾಶವಿಲ್ಲ. ಸ್ಥಳೀಯರು ಹೇಳುವಂತೆ ಇದು ಬಹಳ ಹಳೆಯ ಕಾಲದಿಂದಲೇ ಇರುವ ಸಂಪ್ರದಾಯ. ಈ ದೇವಸ್ಥಾನ ಎಲ್ಲಿದೆ? ನವರಾತ್ರಿಯಲ್ಲಿ ಮಹಿಳೆಯರನ್ನು ಏಕೆ ದೇವಸ್ಥಾನ ಒಳಗೆ ಬಿಡುವುದಿಲ್ಲ? ಆ ದೇವಾಲಯದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ದೇವಸ್ಥಾನ ಎಲ್ಲಿದೆ ? – ಬಿಹಾರದ ನಾಲಂದಾ ಜಿಲ್ಲೆಯ ಘೋಸ್ರಾವನ್ ಗ್ರಾಮದಲ್ಲಿರುವ ಪ್ರಸಿದ್ಧ ಮಾತೆ ಆಶಾಪುರಿ ದೇವಸ್ಥಾನಕ್ಕೆ ನವರಾತ್ರಿ ಸಮಯದಲ್ಲಿ ಸತತ 9-10 ದಿನಗಳ ಕಾಲ ಮಹಿಳೆಯರಿಗೆ ಪ್ರವೇಶ ನಿಷೇಧವಿರುತ್ತದೆ. ನವರಾತ್ರಿಯ ಮೊದಲ ದಿನದಿಂದ ವಿಜಯದಶಮಿಯ ಆರತಿಯವರೆಗೆ ದೇವಸ್ಥಾನದ ಆವರಣಕ್ಕೆ ಮತ್ತು ಗರ್ಭಗುಡಿಗೆ ಮಹಿಳೆಯರನ್ನು ಬಿಡುವುದಿಲ್ಲ.
ದೇವಸ್ಥಾನದಲ್ಲಿ ವಿಶೇಷ ತಾಂತ್ರಿಕ ಪೂಜೆಗಳು ಮತ್ತು ಸಾಧನೆಗಳು ನಡೆಯುವ ಕಾರಣ ಈ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸಲಾಗುತ್ತದೆ. ದೇವಿಯನ್ನೇ ಪೂಜಿಸುವ ಸ್ಥಳದಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧಿಸಿರುವುದು ಅನೇಕ ಜನರ ಕುತೂಹಲ ಹೆಚ್ಚಿಸುವ ವಿಷಯವಾಗಿದೆ.
ಈ ನಿಯಮಕ್ಕೆ ದೇವಸ್ಥಾನದ ಹಳೆಯ ಸಂಪ್ರದಾಯ, ಪುರಾಣ ಕಥೆ ಅಥವಾ ಸ್ಥಳೀಯ ನಂಬಿಕೆ ಕಾರಣವಾಗಿದೆ. ಹೆಚ್ಚಿನ ದೇವಸ್ಥಾನಗಳಲ್ಲಿ ಮಹಿಳೆಯರು ಸುಲಭವಾಗಿ ಪೂಜೆ ಮಾಡಬಹುದು. ಆದರೆ ಇಲ್ಲಿ ಮಾತ್ರ ಅವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಭಕ್ತರಲ್ಲಿ ಕುತೂಹಲ ಮತ್ತು ಚರ್ಚೆ ಹುಟ್ಟಿಕೊಂಡಿದೆ.
ದೇವಸ್ಥಾನದಲ್ಲಿ ಇತಿಹಾಸ ಏನು?: ಮಾತೆ ಆಶಾಪುರಿ ದೇವಸ್ಥಾನಕ್ಕೆ ಈ ಹೆಸರು ಬರಲು ಹಲವು ಕಾರಣಗಳಿವೆ. “ಆಶಾ” ಎಂದರೆ ಆಸೆ ಅಥವಾ ಮನಸ್ಸಿನ ಬಯಕೆ. ಇಲ್ಲಿ ನಿಜವಾಗಿ ಪ್ರಾರ್ಥಿಸುವ ಭಕ್ತರ ಎಲ್ಲಾ ಆಸೆಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಆದ್ದರಿಂದ ದೇವಿಗೆ “ಆಶಾಪುರಿ” ಎಂಬ ಹೆಸರು ಬಂದಿದೆ. ಸ್ಥಳೀಯರು ಇದನ್ನು “ಆಶಾ ಥಾನ್” ಎಂದೂ ಕರೆಯುತ್ತಾರೆ.
ಬೌದ್ಧ ಕಾಲದಲ್ಲಿ ನಳಂದ ವಿಶ್ವವಿದ್ಯಾಲಯದ ಸಮಯದಲ್ಲಿ (ವಿಶೇಷವಾಗಿ 9ನೇ ಶತಮಾನದಲ್ಲಿ) ಸುಮಾರು 1,800 ಬೌದ್ಧ ಸನ್ಯಾಸಿಗಳು ಇಲ್ಲಿಗೆ ಬಂದು ತಮ್ಮ ಬಯಕೆಗಳನ್ನು ಪೂರೈಸಿಕೊಳ್ಳಲು ಪ್ರಾರ್ಥಿಸಿದರು. ಅವರ ಆಸೆಗಳು ನೆರವೇರಿದ ಕಾರಣದಿಂದ ಈ ಹೆಸರು ಬಂದಿದೆ ಎಂದು ಹೇಳುತ್ತಾರೆ. ಆ ಕಾಲದಲ್ಲಿ ಇದು ತಾಂತ್ರಿಕ ಧಾರ್ಮಿಕ ಅಭ್ಯಾಸಗಳ ಪ್ರಮುಖ ಸ್ಥಳವಾಗಿತ್ತು.
ಆನೇಕ ರಾಜ್ಯಗಳಿಂದ ಭಕ್ತರ ಆಗಮನ?: ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸುವುದಕ್ಕೆ ನಿರ್ಬಂಧಗಳಿದ್ದರೂ, ಭಕ್ತರು ಮಾತೆ ಆಶಾಪುರಿ ದೇವಿಯಲ್ಲಿ ನಂಬಿಕೆ ಇಡುತ್ತಿದ್ದಾರೆ. ನವರಾತ್ರಿಯ ಸಮಯದಲ್ಲಿ ಬಿಹಾರ ಮಾತ್ರವಲ್ಲದೆ ಕೋಲ್ಕತ್ತಾ, ಒಡಿಶಾ, ಮಧ್ಯಪ್ರದೇಶ, ಅಸ್ಸಾಂ, ದೆಹಲಿ, ಜಾರ್ಖಂಡ್ ಮತ್ತು ಇತರ ಸ್ಥಳಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದೇವಿಯ ದರ್ಶನ ಪಡೆಯಲು, ನಮನ ಸಲ್ಲಿಸಲು ಮತ್ತು ವಿಶೇಷ ಪೂಜೆಗಳಲ್ಲಿ ಭಾಗವಹಿಸಲು ಭಕ್ತರು ಉತ್ಸುಹರಾಗಿದ್ದಾರೆ. ಶಕ್ತಿ ಆರಾಧನೆಯ ಸಂಕೇತವಾಗಿ ದೇಶಾದ್ಯಂತ ನವರಾತ್ರಿಯನ್ನು ಆಚರಿಸಲಾಗುತ್ತಿದ್ದರೂ, ಮಾತೆ ಆಶಾಪುರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಈ ವಿಶೇಷ ಆಚರಣೆ ಎಲ್ಲರ ಗಮನ ಸೆಳೆಯುತ್ತಿದೆ.

