Puneeth Rajkumar: What happened on the day of Puneeth Rajkumar’s death? What did the doctors say about Appu’s death five years later? – ಪುನೀತ್ ಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ. ರಮಣ ರಾವ್ ಅವರು, ಅಪ್ಪು ಕೊನೆಯ ಕ್ಷಣಗಳಲ್ಲಿ ನಡೆದ ಘಟನೆಗಳನ್ನು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಕನ್ನಡಿಗರ ಮನದಲ್ಲಿ ಸದಾ ಜೀವಂತವಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನ ಆಗಲಿ ಐದು ವರ್ಷಗಳಾಗಿವೆ. ಆದರೆ ಅಪ್ಪು ಅಕಾಲಿಕ ನಿಧನದ ನೋವು ಅಭಿಮಾನಿಗಳ ಮನದಲ್ಲಿ ಇಂದಿಗೂ ಮಾಸಿಲ್ಲ. ಇದೀಗ ಪುನೀತ್ ಗೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ. ರಮಣ ರಾವ್ ಅವರು, ಅಪ್ಪು ಕೊನೆಯ ಕ್ಷಣಗಳಲ್ಲಿ ನಡೆದ ಘಟನೆಗಳನ್ನು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಜಸ್ಟ್ ಕ್ಯೂರಿಯಸ್ ಕನ್ನಡ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಡಾ. ರಮಣ ರಾವ್, ಪುನೀತ್ ರಾಜ್ಕುಮಾರ್ ಜೊತೆಗಿನ ತಮ್ಮ ವೈಯಕ್ತಿಕ ಒಡನಾಟವನ್ನು ನೆನಪುಮಾಡಿಕೊಂಡಿದ್ದಾರೆ. ಅಪ್ಪು ತಮ್ಮ ಪಾಲಿಗೆ ಕೇವಲ ಒಬ್ಬ ನಟನಾಗಿರಲಿಲ್ಲ, ಕುಟುಂಬದ ಸದಸ್ಯನಂತಿದ್ದರು ಎಂದು ಹೇಳಿದ್ದಾರೆ. ಅಪ್ಪು ಒಬ್ಬ ಅದ್ಭುತ ವ್ಯಕ್ತಿ. ಅವರು ನನಗೆ ಮಗನಿದ್ದಂತೆ. ನನ್ನ ಎರಡನೇ ಮಗನ ಜೊತೆ ಅವರಿಗೆ ಉತ್ತಮ ಸ್ನೇಹವಿತ್ತು ಎಂದು ವೈದ್ಯರು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಅಪ್ಪು ಅಗಲಿಕೆ ತಮ್ಮ ವೃತ್ತಿಜೀವನದ ಅತ್ಯಂತ ನೋವಿನ ಅನುಭವಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ವೈದ್ಯರಾಗಿ ಅನೇಕ ಕಷ್ಟದ ಸಂದರ್ಭಗಳನ್ನು ಎದುರಿಸಿದ್ದರೂ, ಕೆಲವು ಘಟನೆಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಪುನೀತ್ ನಿಧನವೂ ಅಂತಹ ಮರೆಯಲಾಗದ ಘಟನೆಗಳಲ್ಲಿ ಒಂದು ಎಂದು ಭಾವುಕರಾಗಿದ್ದಾರೆ.
2021ರ ಅಕ್ಟೋಬರ್ 29ರಂದು ಪುನೀತ್ ರಾಜ್ಕುಮಾರ್ ಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಅಂದು ಜಿಮ್ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್ ಅಭ್ಯಾಸ ಮಾಡಿದ ಬಳಿಕ ಅವರು ಡಾ. ರಮಣ ರಾವ್ ಕ್ಲಿನಿಕ್ಗೆ ಬಂದಿದ್ದರು.
ಕ್ಲಿನಿಕ್ಗೆ ಬಂದ ಪುನೀತ್ ರಾಜ್ಕುಮಾರ್ ತೀವ್ರವಾಗಿ ಬೆವರುತ್ತಿದ್ದರು ಹಾಗೂ ಸಾಕಷ್ಟು ಆಯಾಸಗೊಂಡಿದ್ದರು. ಈ ಸ್ಥಿತಿಯನ್ನು ಗಮನಿಸಿದ ಡಾ. ರಮಣ ರಾವ್ ಅವರಿಗೆ ಏನೋ ಗಂಭೀರ ಸಮಸ್ಯೆ ಇರಬಹುದೆಂಬ ಅನುಮಾನ ಮೂಡಿತು. ಹೀಗಾಗಿ, ತಡಮಾಡದೆ ಇಸಿಜಿ ಪರೀಕ್ಷೆ ನಡೆಸಿ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದರು.
ಇಸಿಜಿ ವರದಿಯಲ್ಲಿ ಹೃದಯದ ಮೇಲೆ ಒತ್ತಡ ಬಿದ್ದಿರುವ ಸೂಚನೆಗಳು ಕಂಡುಬಂದಿದ್ದವು. ಇದರಿಂದಾಗಿ ಅವರು ತಡಮಾಡದೆ ಮುಂದಿನ ಕ್ರಮಗಳನ್ನು ಕೈಗೊಂಡರು. ಪುನೀತ್ ಗೆ ಔಷಧ ನೀಡಿದ ಬಳಿಕ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು ಎಂದು ಸಂದರ್ಶನದಲ್ಲಿ ವಿವರಿಸಿದ್ದಾರೆ.
ಆದರೆ, ವಿಕ್ರಮ್ ಆಸ್ಪತ್ರೆಗೆ ತಲುಪಲು ಕೇವಲ ಒಂದು ನಿಮಿಷ ಬಾಕಿ ಇರುವಾಗ ಪುನೀತ್ ಹೃದಯ ಬಡಿತ ನಿಂತುಹೋಯಿತು ಎಂದು ಡಾ. ರಮಣ ರಾವ್ ತಿಳಿಸಿದ್ದಾರೆ . ಬಳಿಕ ಆಸ್ಪತ್ರೆಯ ವೈದ್ಯಕೀಯ ತಂಡವು ಅಗತ್ಯ ತುರ್ತು ಚಿಕಿತ್ಸಾ ಕ್ರಮಗಳನ್ನು ಕೈಗೊಂಡು ಪುನೀತ್ ಅವರನ್ನು ಉಳಿಸಲು ಪ್ರಯತ್ನಿಸಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಹೇಳಿದ್ದಾರೆ.
ಪುನೀತ್ ಕೊನೆಯ ಕ್ಷಣಗಳನ್ನು ನೆನಪಿಸಿಕೊಂಡ ಡಾ. ರಮಣ ರಾವ್, ಇದು ನಮ್ಮೆಲ್ಲರಿಗೂ ಅತ್ಯಂತ ದುಃಖಕರ ಕ್ಷಣಗಳಲ್ಲಿ ಒಂದಾಗಿತ್ತು. ನನ್ನ ಸ್ವಂತ ಮಗನನ್ನೇ ಕಳೆದುಕೊಂಡಂತೆ ಭಾಸವಾಯಿತು ಎಂದು ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ 2021ರ ಅಕ್ಟೋಬರ್ 29ರಂದು ತಮ್ಮ 46ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು. ಅಪ್ಪು ನಿಧನ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ, ನಾಡಿನಾದ್ಯಂತ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿತ್ತು. ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ನಾಯಕ ನಟನಾಗಿ ಅಪಾರ ಜನಪ್ರಿಯತೆ ಗಳಿಸಿದ್ದ ಅಪ್ಪು, ತಮ್ಮ ಸರಳ ವ್ಯಕ್ತಿತ್ವ ಮತ್ತು ಸಮಾಜಮುಖಿ ಕಾರ್ಯಗಳಿಂದಲೂ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು.

