Infant’s little finger amputated case: High Court refuses to quash FIR against doctors, hospital management: – ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಡ್ರಿಪ್ ಹಾಕಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಸೂಚಿಸಿದ ಬಳಿಕ ನರ್ಸ್ ಡ್ರಿಪ್ ತೆಗೆಯುವಾಗ ಆಕಸ್ಮಿಕವಾಗಿ ಮಗುವಿನ ಕಿರುಬೆರಳು ಕತ್ತರಿಸಿದೆ ಎನ್ನಲಾಗಿದೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(ಬಿ) ಅಡಿ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ವೈದ್ಯರು ಮತ್ತು ಆಸ್ಪತ್ರೆ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು.
- ಡ್ರಿಪ್ ತೆಗೆಯುವಾಗ ಶಿಶುವಿನ ಕಿರುಬೆರಳು ಕತ್ತರಿಸಿದ ಪ್ರಕರಣ.
- ವೈದ್ಯರು, ಆಸ್ಪತ್ರೆ ಆಡಳಿತದ ವಿರುದ್ಧದ ಎಫ್ಐಆರ್ ರದ್ದತಿಗೆ ಹೈಕೋರ್ಟ್ ನಕಾರ.
- ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ನಕಾರ.
![]()
ಬೆಂಗಳೂರು: ಆರು ತಿಂಗಳು ಪ್ರಾಯದ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ಕತ್ತರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಪತ್ರೆ ಆಡಳಿತದ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಆಸ್ಪತ್ರೆ ಮತ್ತು ವೈದ್ಯರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ‘‘ಘಟನೆಯ ಬಳಿಕ ಮಗುವನ್ನು ನಾಲ್ಕು ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗದಲ್ಲಿರಿಸಲಾಗಿತ್ತು. ಈ ಅವಧಿಯಲ್ಲಿನಿಖರವಾಗಿ ಏನಾಯಿತು ಮತ್ತು ವೈದ್ಯಕೀಯ ಶಿಷ್ಟಾಚಾರ ಪಾಲಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ,’’ ಎಂದು ಅಭಿಪ್ರಾಯಪಟ್ಟಿದೆ.
‘‘ಘಟನೆಯ ನಂತರದ ನಾಲ್ಕು ಗಂಟೆಗಳ ಅವಧಿಯಲ್ಲಿಏನು ನಡೆದಿದೆ ಎಂಬುದನ್ನು ತನಿಖೆ ಮಾಡಬೇಕಿದೆ. ಮಗುವಿನ ಆರೈಕೆಯಲ್ಲಿವೈದ್ಯರು ಅಗತ್ಯ ಮುನ್ನೆಚ್ಚರಿಕೆ ವಹಿಸದಿದ್ದರೆ ಅಥವಾ ನಿಗದಿತ ವೈದ್ಯಕೀಯ ಶಿಷ್ಟಾಚಾರ ಅನುಸರಿಸದಿದ್ದರೆ ಅದು ನಿರ್ಲಕ್ಷ್ಯದ ಪ್ರಕರಣವಾಗಬಹುದು. ಎಲ್ಲಅಗತ್ಯ ಕ್ರಮಗಳನ್ನು ಅನುಸರಿಸಿದ್ದರೆ ನಿರ್ಲಕ್ಷ್ಯ ಎಂದು ಪರಿಗಣಿಸಲು ಸಾಧ್ಯವಾಗದಿರಬಹುದು,’’ ಎಂದು ನ್ಯಾಯಾಲಯ ಹೇಳಿದೆ.
‘‘ಪ್ರಕರಣದ ಬಗ್ಗೆ ವಸ್ತುನಿಷ್ಠ ತನಿಖೆ ನಡೆಸಬೇಕು. ಇದು ವೈದ್ಯಕೀಯ ನಿರ್ಲಕ್ಷ್ಯವೇ ಎಂಬುದನ್ನು ನಿರ್ಧರಿಸಲು ತನಿಖಾಧಿಕಾರಿ ತಜ್ಞರ ನೆರವು ಪಡೆದು, ನಂತರ ಸೂಕ್ತ ವರದಿ ಸಲ್ಲಿಸಬೇಕು,’’ ಎಂದು ಹೈಕೋರ್ಟ್ ನಿರ್ದೇಶಿಸಿದೆ. ಈ ಎಲ್ಲಅಂಶಗಳನ್ನು ತನಿಖೆಯ ಮೂಲಕವೇ ನಿರ್ಧರಿಸಬೇಕಿದೆ ಎಂದು ಹೇಳಿದ ಹೈಕೋರ್ಟ್, ಎಫ್ಐಆರ್ ರದ್ದುಗೊಳಿಸುವ ಮನವಿಯನ್ನು ತಿರಸ್ಕರಿಸಿ ಅರ್ಜಿ ವಿಲೇವಾರಿ ಮಾಡಿತು.
ಆಸ್ಪತ್ರೆ ಪರ ವಕೀಲರು, ‘‘ಘಟನೆ ನಡೆದಾಗ ಸಂಬಂಧಪಟ್ಟ ವೈದ್ಯರು ಸ್ಥಳದಲ್ಲಿರಲಿಲ್ಲ. ದೂರಿನಲ್ಲಿಯೂ ಅವರ ವಿರುದ್ಧ ನಿರ್ದಿಷ್ಟ ಆರೋಪ ಮಾಡಿಲ್ಲ. ಮಕ್ಕಳ ತಜ್ಞರಾಗಿರುವ ವೈದ್ಯರಿಗೆ ಕತ್ತರಿಸಿದ ಬೆರಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಪರಿಣತಿ ಇರಲಿಲ್ಲ. ಬಳಿಕ ಸೂಕ್ತ ಶಸ್ತ್ರಚಿಕಿತ್ಸಕರನ್ನು ಕರೆಸಿ ಚಿಕಿತ್ಸೆ ನೀಡಲಾಗಿದೆ. ಹಾಗಾಗಿ, ಎಫ್ಐಆರ್ ದಾಖಲಿಸಿರುವುದು ಕಾನೂನು ಪ್ರಕ್ರಿಯೆಯ ದುರುಪಯೋಗ,’’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಘಟನೆಗೆ ಕಾರಣವಾದ ನರ್ಸ್ ವಿರುದ್ಧ ಆಂತರಿಕ ವಿಚಾರಣೆ ನಡೆಸಿ ಅಮಾನತುಗೊಳಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದೂ ಆಸ್ಪತ್ರೆ ಆಡಳಿತ ತಿಳಿಸಿತ್ತು.
ಆದರೆ, ಪ್ರತಿವಾದಿ ಮಗುವಿನ ಪೋಷಕರ ಪರ ವಕೀಲರು, ‘‘ಘಟನೆ ಕುರಿತು ಕರ್ತವ್ಯದಲ್ಲಿದ್ದ ವೈದ್ಯರಿಗೆ ನರ್ಸ್ ತಕ್ಷಣ ಮಾಹಿತಿ ನೀಡಿದ್ದರೂ ನಾಲ್ಕು ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಲಿಲ್ಲ. ಈ ಅವಧಿಯಲ್ಲಿಪ್ರಥಮ ಚಿಕಿತ್ಸೆ ಹೊರತುಪಡಿಸಿ ಮಗುವಿಗೆ ಬೇರೆ ಚಿಕಿತ್ಸೆ ನೀಡದೆ ನಿಗಾದಲ್ಲಿಇರಿಸಲಾಗಿತ್ತು. ತಜ್ಞ ಶಸ್ತ್ರಚಿಕಿತ್ಸಕರನ್ನು ತಕ್ಷಣ ಕರೆಸದೆ ಅಥವಾ ಮಗುವನ್ನು ಉನ್ನತ ಚಿಕಿತ್ಸಾ ಸೌಲಭ್ಯವಿರುವ ಮತ್ತೊಂದು ಆಸ್ಪತ್ರೆಗೆ ಕಳುಹಿಸದೆ ನಿರ್ಲಕ್ಷ್ಯ ವಹಿಸಲಾಗಿದೆ,’’ ಎಂದು ಆರೋಪಿಸಿದರು.
