Sting Operation Panic: Congress’s latest attempt to resolve suspicions!: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ತಲ್ಲಣ ಸೃಷ್ಟಿಸಿದೆ. ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ? ಎಂಬ ಚರ್ಚೆಗಳು ಕಾಂಗ್ರೆಸ್ ಪಕ್ಷದಲ್ಲೇ ನಾನಾ ರೀತಿಯ ವ್ಯಾಖ್ಯಾನಕ್ಕೆ ಅವಕಾಶ ಕಲ್ಪಿಸಿದೆ. ಈ ಅನುಮಾನವನ್ನು ಬಗೆಹರಿಸಲು ಕಾಂಗ್ರೆಸ್ ನಲ್ಲಿ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಗೊಂದಲ ಸೃಷ್ಟಿಗೆ ಅವಕಾಶ ನೀಡುತ್ತದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
- ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ತಲ್ಲಣ ಸೃಷ್ಟಿಸಿದೆ.
- ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ? ಎಂಬ ಚರ್ಚೆಗಳಿಗೆ ಉತ್ತರ ಸಿಕ್ಕಿಲ್ಲ.
- ಸ್ಟಿಂಗ್ ಅನುಮಾನವನ್ನು ಬಗೆಹರಿಸಲು ಕಾಂಗ್ರೆಸ್ ನಲ್ಲಿ ಇನ್ನಿಲ್ಲದ ಪ್ರಯತ್ನಗಳು.
![]()
ಬೆಂಗಳೂರು: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಕಾಂಗ್ರೆಸ್ ಮತ್ತು ಜೆಡಿಎಸ್ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಮಾತ್ರ ಕಾರಣವಾಗದೆ, ಪಕ್ಷದಲ್ಲೂ ಆಂತರಿಕ ಭಿನ್ನಾಭಿಪ್ರಾಯಕ್ಕೂ ಕಾರಣವಾಗುತ್ತಿದೆ. ಅಧಿಕಾರ ಹಸ್ತಾಂತರದ ಬಳಿಕ ಕೈ ಪಾಳಯದಲ್ಲಿ ತಲೆಧೋರಿರುವ ಆಂತರಿಕ ಭಿನ್ನಮತ ಮತ್ತಷ್ಟು ಭುಗಿಲೇಳಲು ಇದು ಅವಕಾಶ ಕಲ್ಪಿಸುತ್ತಿದೆ. ಕೇವಲ ನಾಯಕರ ಮಟ್ಟದಲ್ಲಿ ಮಾತ್ರವಲ್ಲ, ಕಾರ್ಯಕರ್ತರ ಮಟ್ಟದಲ್ಲೂಇದು ಗೊಂದಲ ಮೂಡಿಸಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋವನ್ನು ಯಾರು ಸೃಷ್ಟಿ ಮಾಡಿದ್ದಾರೆ ಹಾಗೂ ಯಾರು ಹಂಚಿದ್ದಾರೆ ಎಂಬ ಬಗ್ಗೆ ನಾನಾ ವ್ಯಾಖ್ಯಾನಗಳು ಇವೆ. ಆರಂಭದಲ್ಲಿ ಸಿದ್ದರಾಮಯ್ಯ ವಿರುದ್ದದ ಸ್ಟಿಂಗ್ ಆಪರೇಷನ್ ಹಿಂದೆ ಸಿಎಂ ಡಿಕೆ ಶಿವಕುಮಾರ್ ಅವರೇ ಇದ್ದಾರೆ ಎಂದು ನೇರವಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದರು.
ಎಚ್ಡಿಕೆ ಆರೋಪ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಲಹವೇ ಇದಕ್ಕೆಲ್ಲಾ ಕಾರಣ ಎಂಬ ಅಭಿಪ್ರಾಯ ರಾಜಕೀಯ ಪಡಸಾಲೆಯಲ್ಲಿ ಇತ್ತು. ಹಾಗಾಗಿ ಕಾಂಗ್ರೆಸ್ ಮುಖಂಡರ ನಡುವೆಯೇ ಈ ಬಗ್ಗೆ ಗೊಂದಲ ಇತ್ತು. ಕೆಲವು ಸಚಿವರು, ಶಾಸಕರು ಎಚ್ಡಿಕೆ ಆರೋಪವನ್ನು ನೇರವಾಗಿ ನಿರಾಕರಿಸಿದ್ದರು. ಆದರೆ, ಮತ್ತೆ ಕೆಲವರು ಮೌನಕ್ಕೆ ಶರಣಾಗಿದ್ದರು.
ಆದರೆ ಪದೇ ಪದೇ ಎಚ್ಡಿ ಕುಮಾರಸ್ವಾಮಿ ಅವರು ಸಿಎಂ ವಿರುದ್ಧ ಟೀಕೆ ಮಾಡುತ್ತಲೇ ಇದ್ದಾರೆ. ನಾನಾ ರೀತಿಯ ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಆದರೆ, ಈ ಬಗ್ಗೆ ಸುದೀರ್ಘವಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಯಾವುದೇ ಸುದೀರ್ಘ ಸ್ಪಷ್ಟನೆಯನ್ನು ನೀಡದೆ, ಆರೋಪವನ್ನು ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಚರ್ಚೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ.
ಸಿದ್ದು ಜೊತೆಗೆ ಡಿಕೆಶಿ ಮಾತುಕತೆ: ಕುಮಾರಸ್ವಾಮಿ ಆರೋಪ ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಕ್ಕೆ ಹಾಗೂ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಕಾಂಗ್ರೆಸ್ನಲ್ಲೇ ಸಿದ್ದರಾಮಯ್ಯ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಹೀಗೆಲ್ಲಾ ಮಾತನಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಆದರೆ, ಚರ್ಚೆಯ ಧಿಕ್ಕು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇದೀಗ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಹಿಂದೆ ಎಚ್ಡಿ ಕುಮಾರಸ್ವಾಮಿ ಅವರೇ ಇದ್ದಾರೆ ಎಂಬ ಚರ್ಚೆಗಳು ಮುನ್ನಲೆಗೆ ಬರುತ್ತಿವೆ. ರಾಜಕೀಯವಾಗಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಹಾಗೂ ಜೆಡಿಎಸ್ ಹೋರಾಟ ಮಾಡುತ್ತಲೇ ಬಂದಿದೆ. ಆದರೆ, ಕುಮಾರಸ್ವಾಮಿ ಅವರು ದಿಢೀರ್ ಆಗಿ ಸಿದ್ದರಾಮಯ್ಯ ಪರವಾಗಿ ಸಾಫ್ಟ್ ಕಾರ್ನರ್ ವ್ಯಕ್ತಪಡಿಸಲು ಶುರುಮಾಡಿದ್ದರು.
ಎಚ್ಡಿಕೆ ಈ ನಡೆಯ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ಚರ್ಚೆಗಳು ಶುರುವಾಗಿದೆ. ಆದರೆ, ಸ್ಟಿಂಗ್ ವಾಸ್ತವ ಏನೆಂಬುವುದು ಇನ್ನೂ ಹೊರ ಬಂದಿಲ್ಲ. ಈ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ಆಗುತ್ತಾ? ಅಥವಾ ಕೇವಲ ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಅಷ್ಟೇ ಸೀಮಿತ ಆಗುತ್ತಾ? ಎಂಬುವುದು ಸದ್ಯಕ್ಕಿರುವ ಕುತೂಹಲ.
