Sting Operation Politics at Climax Stage: Siddaramaiah’s Silence, Anxiety Among Kai Leaders..? – ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ರಾಜಕೀಯ ಇದೀಗ ಕ್ಲೈಮಾಕ್ಸ್ ಹಂತದಲ್ಲಿದೆ. ಸದ್ಯ ದಸರಾ, ವಿಜಯ ದಶಮಿ ಕಾರಣಕ್ಕಾಗಿ ಸರ್ಕಾರ, ವಿಪಕ್ಷ ಸೈಲೆಂಟಾಗಿದೆ. ದಸರಾ ಬೆನ್ನಲ್ಲೇ ಮತ್ತೆ ಚಟುವಟಿಕೆಗಳು ಗರಿಗೆದರಲಿವೆ. ಈ ನಡುವೆ ಪ್ರಕರಣದ ಬಗ್ಗೆ ಮೌನ ವಹಿಸಿರುವ ಸಿದ್ದರಾಮಯ್ಯ ಮೌನ ಮುರಿಯುತ್ತಾರಾ? ಎಂಬುವುದು ಪ್ರಶ್ನೆಯಾಗಿದೆ.
- ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್.
- ಸ್ಟಿಂಗ್ ಆಪರೇಷನ್ ರಾಜಕೀಯ ಇದೀಗ ಕ್ಲೈಮಾಕ್ಸ್ ಹಂತದಲ್ಲಿದೆ.
- ದಸರಾ ಬೆನ್ನಲ್ಲೇ ಮತ್ತೆ ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಉಲ್ಲೇಖಿಸಿ ಸ್ಟಿಂಗ್ ಆಪರೇಷನ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾನಾ ರೀತಿಯ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಇದೆ. ಆದರೆ ಸ್ಟಿಂಗ್ ಮಾಡಿದ್ದು ಯಾರು ಎಂಬ ಬಗ್ಗೆ ಈವರೆಗೆ ಮಾಹಿತಿ ಹೊರಬಂದಿಲ್ಲ. ಸಿದ್ದರಾಮಯ್ಯ ಅವರು ವಿಡಿಯೋಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಇದರ ತನಿಖೆಯೂ ನಡೆಯುತ್ತಿದೆ. ಆದರೆ ಈ ವಿಚಾರದ ಸುತ್ತ ರಾಜಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಲೇ ಇವೆ.
ದಸರಾ ಬ್ರೇಕ್!: ಸ್ಟಿಂಗ್ ಆಪರೇಷನ್ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಆಗ್ರಹಗಳು ಕೇಳಿಬರುತ್ತಿವೆ. ಈ ಬಗ್ಗೆ ಖುದ್ದು ಸಿದ್ದರಾಮಯ್ಯ ಅವರೇ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ಕೂಡಾ ದಾಖಲಾಗಿದೆ. ಪ್ರಕರಣದಿಂದ ಸಿದ್ದರಾಮಯ್ಯ ಬಣ ಬುಸುಗುಡುತ್ತಿದೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ.
ಆದರೆ ಸ್ಟಿಂಗ್ ಹಿಂದೆ ಯಾರಿದ್ದಾರೆ? ಯಾವ ಉದ್ದೇಶಕ್ಕಾಗಿ ನಡೆಸಿದ್ದಾರೆ ಎಂಬ ವಿಚಾರವಾಗಿ ರಾಜಿಯ ಪ್ರಶ್ನೆಯೇ ಇಲ್ಲ, ಯಾವನೇ ಆದರೂ ಕಟಕಟಗೆ ನಿಲ್ಲಿಸಿ ಎಂಬುವುದು ಸಿದ್ದರಾಮಯ್ಯ ಬಣದ ತಾಕೀತಾಗಿದೆ. ಆದರೆ, ಇನ್ನೊಂದೆಡೆ ಕಾಂಗ್ರೆಸ್ಸಿಗರಿಂದಲೇ ಸಿದ್ದರಾಮಯ್ಯ ಚಾರಿತ್ರ್ಯವಧೆ ನಡೆಯುತ್ತಿದೆ ಎಂಬ ಅಭಿಪ್ರಾಯವನ್ನು ವಿಪಕ್ಷಗಳು ಹರಿಯಬಿಡುತ್ತಿವೆ.
ಸದ್ಯ ವಿಜಯ ದಶಮಿ ಹಾಗೂ ದಸರಾ ಹಬ್ಬದ ಬ್ಯುಸಿಯಲ್ಲಿ ಸಿಎಂ ಹಾಗೂ ಸಚಿವರು ಇದ್ದಾರೆ. ಇತ್ತ ವಿಪಕ್ಷಗಳ ನಾಯಕರು ಹಬ್ಬದ ಮೂಡ್ ನಲ್ಲಿದ್ದಾರೆ. ಹಾಗಾಗಿ ದಸರಾ ಮುಗಿದ ಬಳಿಕ ಹೋರಾಟ ತೀವ್ರಗೊಳಿಸಲು ಜೆಡಿಎಸ್ ಸಜ್ಜಾಗುತ್ತಿದೆ.
ಮೌನ ಮುರಿಯುತ್ತಾರಾ ಸಿದ್ದರಾಮಯ್ಯ: ಈ ನಡುವೆ ಸಿದ್ದರಾಮಯ್ಯ ಮೌನ ಮುರಿದರೆ ಮುಂದೇನು ಎಂಬ ಚಿಂತೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ನೀಡುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡಬಹುದು. ಹೀಗಾಗಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಿರಿ ಎಂದು ಕೆಲವು ಸಚಿವರು ಒತ್ತಾಯ ಮಾಡುತ್ತಿದ್ದಾರೆ.
ಸ್ಟಿಂಗ್ ನಾನೆ ಮಾಡಿಸಿದ್ದು ಎನ್ನುತ್ತಿರುವ ವ್ಯಕ್ತಿಗಳ ಬಂಧನಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಚರ್ಚೆಗಳು ಸಿದ್ದರಾಮಯ್ಯ ಬಣದಲ್ಲಿ ನಡೆಯುತ್ತಿದೆ. ಹೀಗಾಗಿ ಸ್ಟಿಂಗ್ ಆಪರೇಷನ್ ಪ್ರಕರಣದ ಅಂತ್ಯ ತುಂಬಾ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಮುಂದಿನ ಬೆಳವಣಿಗೆಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
