Kannadigas in trouble in Saudi Arabia appeal to governments for protection! -
ರಿಯಾದ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ತೀವ್ರಗೊಂಡಿದೆ. ಇರಾನ್ ಬೆಂಬಲಿತ ಯೆಮೆನ್ನ ಹೌತಿ ಬಂಡುಕೋರರ ಸರಣಿ ದಾಳಿಗಳಿಂದಾಗಿ ಸೌದಿ ಅರೇಬಿಯಾದಲ್ಲಿ ಸಂಕಟಮಯ ವಾತಾವರಣ ನಿರ್ಮಾಣವಾಗಿದೆ. ರಿಯಾದ್ ಏರ್ಪೋರ್ಟ್ ಸೇರಿದಂತೆ ಪ್ರಮುಖ ಪ್ರದೇಶಗಳ ಮೇಲೆ ಹೌತಿಗಳು ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಅಸ್ಥಿರಗೊಳಿಸಲಾಗಿದೆ.
ಇಂಡಿಗೋ ಹಾಗೂ ಸೌದಿ ಏರ್ಲೈನ್ಸ್ ಸೇರಿದಂತೆ ಪ್ರಮುಖ ವಿಮಾನಗಳ ಹಾರಾಟ ನವೆಂಬರ್ 4ರವರೆಗೆ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ, ಮೆಕ್ಕಾ ಸೇರಿದಂತೆ ವಿವಿಧೆಡೆ ತೆರಳಿದ್ದ ಅಂದಾಜು 4,000ಕ್ಕೂ ಅಧಿಕ ಕನ್ನಡಿಗರು ತಾಯ್ನಾಡಿಗೆ ಮರಳಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ಕನ್ನಡಿಗರು ಅತಂತ್ರದಲ್ಲಿ!
ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಇತ್ಯಾದಿ ಕಾರಣಗಳಿಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಕನ್ನಡಿಗರು ಈ ಯುದ್ಧ ಭೀತಿಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಹಾಗೂ ವಾಸವಿರುವ ಸ್ಥಳಗಳಲ್ಲಿ ಪರದಾಡುವಂತಾಗಿದೆ. ಈ ಗಂಭೀರ ಪರಿಸ್ಥಿತಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಚಿಕ್ಕಮಗಳೂರು ಮೂಲದ ಅಪ್ಸರ್ ಹಿಂದೂಸ್ಥಾನಿ, ಸಂಕಷ್ಟದಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತುರ್ತಾಗಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಬೇಕು ಎಂದು ಬಲವಾಗಿ ಮನವಿ ಮಾಡಿಕೊಂಡಿದ್ದಾರೆ.
ಈ ಅನಿರೀಕ್ಷಿತ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯವು ತಕ್ಷಣವೇ ಮಧ್ಯಪ್ರವೇಶಿಸಿ ಸೌದಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ಕನ್ನಡಿಗರ ಯೋಗಕ್ಷೇಮವನ್ನು ವಿಚಾರಿಸಬೇಕು. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದಲೂ ತುರ್ತು ಕ್ರಮ ಕೈಗೊಂಡು, ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಿ ಕನ್ನಡಿಗರ ರಕ್ಷಣೆಗೆ ಅಗತ್ಯವಿರುವ ಎಲ್ಲಾ ರೀತಿಯ ರಾಜತಾಂತ್ರಿಕ ನೆರವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿನ ವಿಮಾನಯಾನ ಸೇವೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿರುವುದು ಪ್ರವಾಸಿಗರು ಹಾಗೂ ಅವರ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ. ಕೂಡಲೇ ಸರ್ಕಾರಗಳು ಎಚ್ಚೆತ್ತುಕೊಂಡು ಸಂಕಷ್ಟದಲ್ಲಿರುವ ಕನ್ನಡಿಗರ ಸುರಕ್ಷತೆಗೆ ಮುಂದಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
