‘Businessman tried to carry out sting operation against me using Meta smart glasses’: CM DK makes serious allegations – ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ವಿರುದ್ಧವೇ ನಡೆದ ಸ್ಟಿಂಗ್ ಆಪರೇಷನ್ ಪ್ರಯತ್ನದ ಸಂಚು ನಡೆದಿತ್ತು ಎಂದು ಹೇಳಿಕೊಂಡಿದ್ದಾರೆ. ಉದ್ಯಮಿಯೊಬ್ಬರು ಮೆಟಾ AI ಸ್ಮಾರ್ಟ್ ಕನ್ನಡಕ ಧರಿಸಿ ತಮ್ಮನ್ನು ಭೇಟಿಯಾಗಿ, ವ್ಯವಹಾರದ ಬದಲು ರಾಜಕೀಯ ಹಾಗೂ ಬೂತ್ ಮಟ್ಟದ ತಂತ್ರಗಳ ಬಗ್ಗೆ ಮಾತನಾಡಿದ್ದು, ಅನುಮಾನ ಹುಟ್ಟಿಸುವಂತಿತ್ತು. ಅಲ್ಲದೆ, ಆತ ನನ್ನನ್ನು ಭೇಟಿಯಾದಾಗ ಮಾತ್ರ ಮೆಟಾ ಕನ್ನಡಕ ಧರಿಸಿದ್ದನ್ನು ಗಮನಿಸಿದೆ, ಬಹುಶಃ ಸ್ಟಿಂಗ್ ಆಪರೇಷನ್ ನಡೆಸಲು ಯತ್ನವಿರಬಹುದು ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಸಚಿವ ಸಂಪುಟ ಸಭೆಯಲ್ಲೇ ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದು, ಸೂಕ್ತ ಸಮಯ ಬಂದಾಗ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
- ಉದ್ಯಮಿಯಿಂದ ಸಿಎಂ ಡಿಕೆ ಶಿವಕುಮಾರ್ ವಿರುದ್ದವೇ ಸ್ಟಿಂಗ್ ಆಪರೇಷನ್ ಯತ್ನ.
- ಮೆಟಾ AI ಸ್ಮಾರ್ಟ್ ಗ್ಲಾಸ್ ಧರಿಸಿದ್ದ ವ್ಯಕ್ತಿ ನನ್ನ ಬಳಿಗೆ ಬಂದು ವ್ಯವಹಾರದ ಬದಲಿಗೆ ರಾಜಕೀಯ ಮಾತಾಡಿದ್ದು, ಇದು ಸ್ಟಿಂಗ್ ಆಪರೇಷನ್ ಭಾಗ ಎಂಬ ಶಂಕೆಯಿದೆ ಎಂದ ಡಿಕೆಶಿ.
- ಇದು ಸಮಯವಲ್ಲ, ಸೂಕ್ತ ಸಮಯ ಬಂದಾಗ ಸ್ಟಿಂಗ್ ಕುರಿತಂತೆ ಎಲ್ಲಾ ಮಾಹಿತಿಯನ್ನು ಬಹಿರಂಗ ಮಾಡ್ತೀನಿ ಎಂದು ಡಿಕೆಶಿ ಹೇಳಿಕೆ.
![]()
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ಕೋಲಾಹಲ ತೀವ್ರಗೊಳ್ಳುತ್ತಿರುವ ನಡುವೆ ಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದು, ಮೆಟಾ AI ಕನ್ನಡಕ ಧರಿಸಿದ್ದ ಉದ್ಯಮಿಯೊಬ್ಬರು ತಮ್ಮನ್ನು ಭೇಟಿಯಾಗಿದ್ದು, ಇದು ಬಹುಶಃ ತಮ್ಮ ಮೇಲೆ ಕಣ್ಣಿಡುವ ಮೂಲಕ ಸ್ಟಿಂಗ್ ಆಪರೇಷನ್ ಮಾಡಲು ನಡೆಸಿದ ಪ್ರಯತ್ನವಿರುಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಸಿಎಂ ಡಿಕೆ ಶಿವಕುಮಾರ್ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯೆ ನೀಡಿದ್ದು, ಈ ವೇಳೆ, “ದೇವರು ನನಗೆ ಒಂದು ಶಕ್ತಿಯನ್ನು ಕೊಟ್ಟಿದ್ದಾನೆ, ನಾನು ಮುಖಗಳನ್ನು ಓದಬಲ್ಲೆ. ಪ್ರತಿದಿನ ಸಾವಿರಾರು ಜನರು ನನ್ನನ್ನು ಭೇಟಿಯಾಗುತ್ತಾರೆ ಮತ್ತು ನನ್ನ ಅನುಭವದ ಆಧಾರದ ಮೇಲೆ ಯಾರಾದರೂ ನನ್ನ ಬಳಿಗೆ ಏಕೆ ಬಂದಿದ್ದಾರೆಂದು ಅವರ ಮುಖಗಳನ್ನು ಓದಿ ನಾನು ಹೇಳಬಲ್ಲೆ” ಎಂದಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ದ ಮೆಟಾ ಗ್ಲಾಸ್ ಬಳಸಿ ಸ್ಟಿಂಗ್ ಆಪರೇಷನ್ಗೆ ಯತ್ನ!
ಮುಂದುವರೆದು, “ಹೀಗೆ ಒಮ್ಮೆ, ಮೆಟಾ ಕನ್ನಡಕವನ್ನು ಧರಿಸಿದ್ದ ಒಬ್ಬ ಉದ್ಯಮಿಯೊಬ್ಬರು ನನ್ನನ್ನು ಭೇಟಿ ಮಾಡಿ ವ್ಯವಹಾರದ ಬಗ್ಗೆ ಚರ್ಚಿಸಲು ಬಂದರು. ಅಧಿಕಾರಿಗಳು ಅಪಾಯಿಂಟ್ಮೆಂಟ್ ನಿಗದಿಪಡಿಸಿದ್ದರು. ಈ ಉದ್ಯಮಿ ನನ್ನನ್ನು ಮುಂಭಾಗದ ಕೋಣೆಗೆ ಕರೆದೊಯ್ದು ತಮ್ಮ ಲ್ಯಾಪ್ಟಾಪ್ ತೆರೆದಿದ್ದು, ಆರಂಭದಲ್ಲಿ ಉದ್ಯಮದ ಕುರಿತು ಮಾತನಾಡಿದ್ದಾರೆ. ಆದರೆ, ನಿಧಾನವಾಗಿ ತಮ್ಮ ಕಂಪನಿ ಹಾಗೂ ಅವ್ಯವಹಾರಗಳ ಕುರಿತು ಮಾತನಾಡುವುದನ್ನು ನಿಲ್ಲಿಸಿ, ಶೀಘ್ರವೇ ಮಾತನ್ನ ಉದ್ಯಮದಿಂದ ರಾಜಕೀಯದ ಕಡೆಗೆ ತಿರುಗಿಸಿದ್ದು, ರಾಜಕೀಯ ಮತ್ತು ಸೆಫಾಲಜಿ ಅಂದರೆ ಬೂತ್ ಮಟ್ಟದಲ್ಲಿ ಯಾವ ತಂತ್ರಗಳನ್ನು ಮಾಡಬಹುದು ಎಂಬುದರ ಕುರಿತಂತೆ ಚರ್ಚಿಸಲು ಶುರು ಮಾಡಿದ್ದಾರೆ. ಇದು ನನಗೆ ಅನುಮಾನ ಹುಟ್ಟಿಸುವಂತೆ ಮಾಡಿದ್ದು, ನಾನು ಆತನ ಹಿನ್ನಲೆಯನ್ನು ತನಿಖೆ ನಡೆಸುವಂತೆ ಹೇಳಿದ್ದೆ” ಎಂದಿದ್ದಾರೆ.
ಡಿಕೆಶಿ ಹಾಗೂ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ಗೆ ಯತ್ನ:
ಅಲ್ಲದೆ, ತಮ್ಮ ಹಾಗೂ ತಮ್ಮ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ನಡೆಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ವಿಶ್ವಾಸಾರ್ಹ ಮಾಹಿತಿ ತಮಗೆ ಲಭಿಸಿದೆ ಎಂದಿರುವ ಡಿಕೆಶಿ ಈ ಹಿನ್ನಲೆಯಲ್ಲಿ ” ಸಚಿವ ಸಂಪುಟ ಸಭೆಯಲ್ಲಿ, ನಾನು ನನ್ನ ಸಚಿವರಿಗೆ ಜಾಗರೂಕರಾಗಿರಲು ಸಲಹೆ ನೀಡಿದ್ದೆ. ಕುಟುಂಬದ ಮುಖ್ಯಸ್ಥನಾಗಿ ನಾನು ಹಾಗೆ ಮಾಡಿದೆ. ಬಲೆಗೆ ಬೀಳದಂತೆ ನಾನು ಅವರನ್ನು ಎಚ್ಚರಿಸಿದ್ದೆ. ಅದರಲ್ಲಿ ಏನು ತಪ್ಪಿದೆ, ನನ್ನ ಬಳಿ ದಾಖಲೆಗಳಿವೆ” ಎಂದು ತಿಳಿಸಿದ್ದಾರೆ.
ಇನ್ನು, ಈ ಸ್ಟಿಂಗ್ ಆಪರೇಷನ್ ಕುರಿತಂತೆ “ನನ್ನನ್ನು ಒಳಗೊಂಡ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಯಾರು ಹೇಳಿದ್ದು? ಎಲ್ಲವನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಸೂಕ್ತ ಸಮಯ ಬಂದಾಗ ಎಲ್ಲಾ ಮಾಹಿತಿ ನೀಡ್ತೀನಿ” ಎಂದು ತಿಳಿಸಿದ್ದಾರೆ.
ಮೆಟಾ AI ಸ್ಮಾರ್ಟ್ ಗ್ಲಾಸ್ ಬಳಸಿ ತಮ್ಮ ವಿರುದ್ದ ಸ್ಟಿಂಗ್ ಆಪರೇಷನ್ ಷಡ್ಯಂತ್ರಕ್ಕೆ ಯತ್ನ ನಡೆದಿದೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸದ್ಯ ಈ ಮೆಟಾ ಗ್ಲಾಸ್ ಹೇಗೆ ಕಾರ್ಯ ನಿರ್ವಹಿಸುತ್ತೆ? ಇದಕ್ಕಿರುವ ಸವಾಲುಗಳೇನು ಎಂಬುದರ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ಮೆಟಾ ಸ್ಮಾರ್ಟ್ ಗ್ಲಾಸ್ ಉಪಯೋಗ :
- ಮೆಟಾ ಸ್ಮಾರ್ಟ್ ಗ್ಲಾಸ್ ಅಥವಾ ಕನ್ನಡಕವನ್ನು ಬಳಸುವುದು ಸುಲಭವಾಗಿದ್ದು, ಇದು ಕೈಗಳನ್ನು ಬಳಸದೇ ಕನ್ನಡಕ ಮೂಲಕವೇ ನಮ್ಮ ಸುತ್ತಲಿರುವ ವಸ್ತುಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯಲು ನೆರವಾಗುತ್ತದೆ.
- ಮೆಟಾ ಸ್ಮಾರ್ಟ್ ಕನ್ನಡಕದಲ್ಲಿ ಬಿಲ್ಟ್ ಇನ್ ಕ್ಯಾಮೆರಾಗಳನ್ನು ಬಳಸಿಕೊಂಡು ಹೈ-ಡೆಫಿನಿಷನ್ ಫೋಟೋಗಳು, POV ವೀಡಿಯೊಗಳು ಸೆರೆಹಿಡಿಯುವ ಜೊತೆಗೆ ಇದರ ಲೈವ್ಸ್ಟ್ರೀಮ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೇರವಾಗಿ ಹಂಚಿಕೊಳ್ಳಲು ಅವಕಾಶ ಸಹ ನೀಡುತ್ತದೆ.
- ಪಠ್ಯವನ್ನು ಅನುವಾದಿಸಲು, ಸುತ್ತಲಿನ ವಸ್ತುಗಳನ್ನು ಗುರುತಿಸಲು ಮತ್ತು ಪ್ರಶ್ನೆಗಳಿಗೆ ಉತ್ತರಿಸಲು ಧ್ವನಿ ಆಜ್ಞೆಗಳ ಮೂಲಕ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ನೈಜ ಸಮಯದಲ್ಲಿ ವಿಶ್ಲೇಷಿಸುತ್ತದೆ.
- ಅಲ್ಲದೆ, ಇದರಲ್ಲಿರುವ ಬಿಲ್ಡ್ ಇನ್ ಆಡಿಯೋ ಫೀಚರ್ನಿಂದಾಗಿ ಫೋನ್ಕರೆಗಳನ್ನು ಸ್ವೀಕರಿಸಲು ಹಾಗೂ ವಾಯ್ಸ್ ಕಾಮಂಡ್ ಮೂಲಕ ಕರೆ ಮಾಡಲು ಅವಕಾಶ ನೀಡತ್ತದೆ, ಇದರ ಜೊತೆಗೆ ಮ್ಯೂಸಿಕ್ ಕೇಳಿಸಿಕೊಳ್ಳುವ ಫೀಚರ್ ಸಹ ಇದೆ.
ಮೆಟಾ ಸ್ಮಾರ್ಟ್ ಗ್ಲಾಸ್ಗಿರುವ ಸವಾಲುಗಳು :
- ಮೆಟಾ ಸ್ಮಾರ್ಟ್ ಗ್ಲಾಸ್ ಇಂಟರ್ನೆಟ್ ಸಂಪರ್ಕ, AI ಸಂಸ್ಕರಣೆ ಮತ್ತು ಮಾಧ್ಯಮಗಳನ್ನು ಸಿಂಕ್ ಮಾಡುವಿಕೆಗಾಗಿ ಸಂಪೂರ್ಣವಾಗಿ ಜೋಡಿಯಾದ ಸ್ಮಾರ್ಟ್ ಫೋನ್ನ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಸ್ಮಾರ್ಟ್ ಫೋನ್ನ ಸಂಪರ್ಕವಿಲ್ಲದೆ ಇದು ಕೆಲಸ ಮಾಡುವುದು ಕಷ್ಟಕರ
- ಮೆಟಾ ಸ್ಮಾರ್ಟ್ ಗ್ಲಾಸ್ನ ಬ್ಯಾಟರಿ ಹಾಗೂ ಸೀಮಿತ ಅಂತರ್ನಿರ್ಮಿತ ಸ್ಟೋರೆಜ್ ಹೊಂದಿದ್ದು, ನಿರಂತರ ವಿಡಿಯೋ ರೆಕಾರ್ಡಿಂಗ್ ಅಥವಾ AI ಬಳಕೆಯ ಸಮಯದಲ್ಲಿ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ ಮತ್ತು ಹೆಚ್ಚಿನ ಡೆಟಾವನ್ನು ಸಂಗ್ರಹಿಸಲು ಸಾಧ್ಯವಿಲ್ಲ.
- ಮೆಟಾ ಸ್ಮಾರ್ಟ್ ಗ್ಲಾಸ್ನ ಕ್ಯಾಮೆರಾವನ್ನು ಮುಚ್ಚಿದಾಗ ಸ್ವಯಂಚಾಲಿತವಾಗಿ ಆಫ್ ಆಗುವ ಕಡ್ಡಾಯ LED ರೆಕಾರ್ಡಿಂಗ್ ಸೂಚಕಗಳ ಮೂಲಕ ಕ್ಯಾಮೆರಾ ಬಳಕೆಯನ್ನು ನಿರ್ಬಂಧಿಸುತ್ತದೆ.
