Yathindra’s anger against Sting, Sidhu’s close associates remain silent: The actions of the supporters are curious – ರಾಜ್ಯದಲ್ಲಿ ಕೋಲಾಹಲವನ್ನು ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿರುದ್ಧ ಯತೀಂದ್ರ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು ಮಾತ್ರ ಈ ನಿಟ್ಟಿನಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರ ನಡೆಯು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಏನು ಕಾರಣ? ಮೌನದ ಹಿಂದೆ ಏನಾದರೂ ಉದ್ದೇಶ ಇದ್ಯಾ? ಈ ಕುರಿತಾದ ಮತ್ತಷ್ಟು ಮಾಹಿತಿ ಇಲ್ಲಿದೆ.
- ರಾಜ್ಯದಲ್ಲಿ ಕೋಲಾಹಲವನ್ನು ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್.
- ಸ್ಟಿಂಗ್ ಆಪರೇಷನ್ ವಿರುದ್ಧ ಸಚಿವ ಯತೀಂದ್ರ ಆಕ್ರೋಶ.
- ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರು ಮಾತ್ರ ಮೌನ ಏಕೆ.
![]()
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಸ್ಟಿಂಗ್ ಅಪರೇಷನ್ ಬಗ್ಗೆ ಸ್ವತಃ ಸಿದ್ದರಾಮಯ್ಯ ಮೌನ ಮುರಿದ್ದಾರೆ. ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದಲೇ ಇದೆಲ್ಲವೂ ನಡೆದಿದೆ ಎಂದು ಅವರು ಆರೋಪ ಮಾಡಿದ್ದಾರೆ. ಈ ನಡುವೆ ಸಚಿವ ಯತೀಂದ್ರ ಸಿದ್ದರಾಮಯ್ಯ ಕೂಡಾ ಸ್ಟಿಂಗ್ ಹಿಂದೆ ಸ್ವಪಕ್ಷೀಯರು ಇದ್ದಾರೆ ಎಂದು ಆರೋಪಿಸಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಆಪ್ತರು ಮಾತ್ರ ಮೌನಕ್ಕೆ ಶರಣಾಗಿದ್ದು ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಆಪ್ತರ ಮಹಾಮೌನ! : ಸ್ಟಿಂಗ್ ವಿರುದ್ಧ ಸಿದ್ದರಾಮಯ್ಯ ಹಾಗೂ ಪುತ್ರ ಯತೀಂದ್ರ ಹೋರಾಟನಡೆಸುತ್ತಿದ್ದರೂ ಬೆಂಬಲಿಗರಿಂದ ಮಾತ್ರ ಮಹಾಮೌನದಲ್ಲಿದ್ದಾರೆ. ಸಿದ್ದರಾಮಯ್ಯರಿಂದ ರಾಜಕೀಯ ಶಕ್ತಿ ಪಡೆದರೂ ಮಾಜಿ ಸಿಎಂ ಬೆನ್ನಿಗೆ ಆಪ್ತರು ನಿಲ್ಲುತ್ತಿಲ್ಲವೆಂಬ ಚರ್ಚೆಗಳು ಕೈಪಾಳಯದಲ್ಲಿ ನಡೆಯುತ್ತಿದೆ. ಸಚಿವರಾದ ಬೈರತಿ ಸುರೇಶ್, ಎಂ.ಬಿ ಪಾಟೀಲ್, ಕೆ.ಜೆ ಜಾರ್ಜ್ ಸೇರಿದಂತೆ ಹಲವರ ಮೌನ ಕುರಿತು ಭಾರೀ ಚರ್ಚೆಗಳು ನಡೆಯುತ್ತಿದೆ.
ಈಗಾಗಲೇ ನಾನು ಯಾವುದೇ ತಪ್ಪು ಮಾಡಿಲ್ಲ, ಸರಿಯಾದ ತನಿಖೆ ನಡೆಯಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. ಇತ್ತ ನಮ್ಮದೇ ಪಕ್ಷದವರು ಈ ಸ್ಟಿಂಗ್ ನಲ್ಲಿದ್ದಾರೆಂದು ಬಹಿರಂಗವಾಗಿಯೇ ಯತೀಂದ್ರ ಅವರು ಸಿಡಿಮಿಡಿಗೊಂಡಿದ್ದಾರೆ. ತಮ್ಮ ತಂದೆಯ ವರ್ಚಸ್ಸನ್ನು ಹಾಳು ಮಾಡಲು ಸ್ಟಿಂಗ್ ಕಳಂಕ ತಂದಿದ್ದಾರೆಂದು ಆಕ್ರೋಶಗೊಂಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಯತೀಂದ್ರ ಇಷ್ಟೆಲ್ಲಾ ಮಾತನ್ನಾಡುತ್ತಿದ್ದರು ಆಪ್ತರು ಬೆನ್ನಿಗೆ ನಿಲ್ಲುತ್ತಿಲ್ಲವೆಂಬ ಚರ್ಚೆ ನಡೆಯುತ್ತಿದೆ. ಈ ವಿಚಾರದ ಕುರಿತಾಗಿ ಇದುವರೆಗೂ ಸಿದ್ದರಾಮಯ್ಯ ಬೆಂಬಲಿಗರು ತುಟಿಕ್ ಪಿಟಿಕ್ ಅಂದಿಲ್ಲ. ಕನಿಷ್ಠಪಕ್ಷ ಸ್ಟಿಂಗ್ ಕೃತ್ಯವನ್ನ ಖಂಡಿಸಬಹುದಾಗಿತ್ತು, ಅದನ್ನೂ ಮಾಡಲಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ರಾಜಕಾರಣಿಗಳನ್ನ ಸ್ಟಿಂಗ್ ಖೆಡ್ಡಾಕ್ಕೆ ಕೆಡಹುವ ಕೃತ್ಯದ ವಿರುದ್ಧವಾದರೂ ನಿಲ್ಲುವ ಧೈರ್ಯ ತೋರಲಿಲ್ಲ ಎಂಬ ಚರ್ಚೆಗಳು ಶುರುವಾಗಿವೆ.
ಸಿದ್ದರಾಮಯ್ಯ ಅವರೊಂದಿಗೆ ಎಲ್ಲ ಶಾಸಕರೂ ಇದ್ದಾರೆ : ಸಿದ್ದರಾಮಯ್ಯ ಅವರು ರಾಜಕೀಯವಾಗಿ ಒಂಟಿಯಾಗಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಒಂಟಿಯಾಗುವ ಪ್ರಶ್ನೆಯೇ ಇಲ್ಲ. ನಮ್ಮ ಎಲ್ಲ ಶಾಸಕರು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ. ಯಾರೂ ಒಂಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಬದುಕಿನಲ್ಲಿ ನಡೆಯಬಾರದಂತಹ ಘಟನೆಗಳನ್ನು ಎಲ್ಲರೂ ಖಂಡಿಸಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಖಂಡಿಸಿದ್ದೇವೆ. ಸಿದ್ದರಾಮಯ್ಯ ಅವರು ಒಂಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು. ತನಿಖೆ ನಡೆಯುತ್ತಿರುವ ವಿಚಾರದಲ್ಲಿ ಈಗಲೇ ಪ್ರತಿಕ್ರಿಯಿಸುವುದು ಸೂಕ್ತವಲ್ಲ. ತನಿಖೆ ಪೂರ್ಣಗೊಂಡು ಅದರ ವರದಿ ಹೊರಬಂದ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು.
