HD Kumaraswamy: Controversial statement about Modi; HD Kumaraswamy lashes out at Mallikarjun Kharge – ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ಖರ್ಗೆ ಮಾತಿನ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು ಅ.26: ಮೋದಿ ಏನ್ ಅವರ ಅಪ್ಪನೂ ಹೋಗ್ತಾರೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಟ್ವೀಟ್ ಮಾಡುವ ಮೂಲಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಚ್ಡಿಕೆ ಅಸಮಾಧಾನ ಹೊರಹಾಕಿದ್ದಾರೆ. ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ, ಅವರ ಮಾತು ಮಾನವೀಯತೆಯ ಅಣಕ ಎಂದು ಗುಡುಗಿದ್ದಾರೆ.
ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ-HDK ಟ್ವೀಟ್ : ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ.ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
‘ಆಚಾರವಿಲ್ಲದ ನಾಲಿಗೆ…’ : ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.
‘ಪ್ರಧಾನಿಗಳ ಕ್ಷಮೆ ಕೇಳಿ ಖರ್ಗೆ’ : ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಹೆಚ್ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ಖರ್ಗೆ ಮಾತಿನ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನ ಖಂಡಿಸಿದ್ದಾರೆ. “ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಅಪಕ್ವರು ಎಂದು ನಾವು ಭಾವಿಸಿದ್ದೆವು. ಆದ್ರೆ ಅವರ ಸಹವಾಸದಿಂದಾಗಿ ಇಡೀ ಕಾಂಗ್ರೆಸ್ ಪಕ್ಷದ ನಾಯಕರು ಅಪಕ್ವತೆ, ಹತಾಶೆ ಮತ್ತು ನಿರಾಶೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದಿದ್ದಾರೆ.
ಇಂತಹ ಕೆಳಮಟ್ಟದ ಭಾಷೆ ಬಳಸುವ ಮೂಲಕ ದೇಶದ ರಾಜಕೀಯ ಸಂಸ್ಕೃತಿಗೆ ಧಕ್ಕೆ ತರುತ್ತಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ನಿರಂತರವಾಗಿ ಇರುವುದರಿಂದ ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು ಹಲವು ರಾಜ್ಯಾಧ್ಯಕ್ಷರವರೆಗೂ ಒಂದೇ ರೀತಿಯ ಭಾಷೆ ಬಳಸುತ್ತಿದ್ದಾರೆ.
ತಮ್ಮ ನಾಯಕ ಹೇಳುವುದನ್ನೇ ಅನುಸರಿಸಬೇಕಾದ ಪರಿಸ್ಥಿತಿ ಅವರ ಮೇಲಿದೆ. ಇತ್ತೀಚೆಗೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಇದೇ ರೀತಿಯ ಭಾಷೆ ಬಳಸಿದ್ದರು. ಈಗ ಕಾಂಗ್ರೆಸ್ ಅಧ್ಯಕ್ಷರೂ ಅದೇ ಹಾದಿ ಹಿಡಿದಿದ್ದಾರೆ” ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಹೇಳಿಕೆಗೆ ಖರ್ಗೆಯವರು ಪ್ರಧಾನಿ ಮೋದಿ ಅವರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ.
