A Manjunath: Former MLA fears honey trap! JDS leader moves court! – ಜೆಡಿಎಸ್ ಮಾಜಿ ಶಾಸಕರಿಗೆ ಹನಿಟ್ರ್ಯಾಪ್ ಭೀತಿ ಶುರುವಾಗಿದ್ದು, ಈ ಹಿನ್ನೆಲೆ ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು: ಸ್ಟಿಂಗ್ ರಾದ್ಧಾಂತ ಈಗಾಗ್ಲೇ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ದಸರಾ, ವಿಜಯದಶಮಿ ಪ್ರಯುಕ್ತ ಕೊಂಚ ತಣ್ಣಗಾಗಿದ್ದ ಈ ವಿಚಾರ ಇದೀಗ ಮತ್ತೆ ಸ್ಫೋಟಗೊಂಡಿದೆ. ಇದೇ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಸಮರವನ್ನೇ ಸಾರಿಬಿಟ್ಟಿದ್ದಾರೆ. ಬಿಜೆಪಿ ನಾಯಕರೂ ಕೂಡ ಹೋದಲ್ಲಿ ಬಂದಲ್ಲಿ ಇದೇ ವಿಚಾರ ಚರ್ಚೆ ಮಾಡ್ತಿದ್ದಾರೆ. ಈ ಬೆನ್ನಲ್ಲೇ ಜೆಡಿಎಸ್ ಮಾಜಿ ಶಾಸಕರಿಗೆ ಹನಿಟ್ರ್ಯಾಪ್ ಭೀತಿ ಎದುರಾಗಿದೆ.
ಸ್ಟಿಂಗ್ ಆಪರೇಷನ್ ವಿಚಾರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ. ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಜೆಡಿಎಸ್ ಮಾಜಿ ಶಾಸಕರಿಗೆ ಹನಿಟ್ರ್ಯಾಪ್ ಭೀತಿ ಶುರುವಾಗಿದ್ದು, ಈ ಹಿನ್ನೆಲೆ ಖಾಸಗಿ ಚಾನಲ್ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷದ ನಾಯಕ ಎ.ಮಂಜುನಾಥ್ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯನ್ನು ಬಿಟ್ಟು ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಈಗ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ. ಮಂಜುನಾಥ್ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಹಾವಳಿ ಹೆಚ್ಚಾಗಿದೆ: ಸ್ಟಿಂಗ್ ಆಪರೇಷನ್ ವಿಚಾರವಾಗಿ ಜೆಡಿಎಸ್ ಉಪ ನಾಯಕಿ ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಹಾವಳಿ ಹೆಚ್ಚಾಗಿದೆ. ಹಿಂದೆ ವಿವಿಧ ರೀತಿಯ ಕಲಬೆರಕೆ ಕುರಿತು ಸ್ಟಿಂಗ್ ಆಪರೇಷನ್ ನಡೆಯುತ್ತಿತ್ತು. ಆದರೆ ವೈಯಕ್ತಿಕ ವಿಷಯಗಳಿಗೆ ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಅದರಲ್ಲೂ ಮಹಿಳೆಯನ್ನು ಮುಂದಿಟ್ಟುಕೊಂಡು ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಅದರಲ್ಲೂ ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ರು.
ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡುವುದು ಸೂಕ್ತ : ಮುಂದುವರೆದು ಮಾತನಾಡಿರುವ ಶಾಸಕಿ ಶಾರದಾ ಪೂರ್ಯನಾಯ್ಕ್, ಇದಕ್ಕೆ ರಾಜ್ಯದ ಜನತೆಯಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಅದರ ಭಾಗವಾಗಿ ಪರಿಷತ್ನ 4 ಸ್ಥಾನಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಮತದಾರರು ಸೂಕ್ತ ಉತ್ತರ ನೀಡಿದ್ದಾರೆ. ಸುಶಿಕ್ಷಿತರು ಎನಿಸಿಕೊಂಡ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟಿಂಗ್ ಆಪರೇಷನ್ ವಿರುದ್ಧ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಯುತ್ತಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡುವುದು ಸೂಕ್ತ ಎಂದು ಆಗ್ರಹಿಸಿದರು.
‘ಸ್ಟಿಂಗ್ ಕೇಸ್ ಸಿಬಿಐಗೆ ಕೊಡ್ಬೇಕು’ : ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಮೂಲಕ ಅವಮಾನ ಆಗಿದೆ. ಯಾರು ಸ್ಟಿಂಗ್ ಮಾಡಿಸಿರೋದು ಅದು ಬಯಲಾಗಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಇದಕ್ಕಾಗಿ ತನಿಖೆ ಆಗಬೇಕು. ಈಗಿನ ತನಿಖೆಯಲ್ಲಿ ಯಾರು ಸ್ಟಿಂಗ್ ಮಾಡಿದವ್ರು ಅಂತ ತನಿಖೆ ಮಾಡ್ತಿಲ್ಲ, ಯಾರು ಹಂಚಿದವ್ರು ಅಂತ ಮಾತ್ರ ತನಿಖೆ ನಡೀತಿದೆ. ಹೀಗಾಗಿ ಇದರಲ್ಲಿ ಸಿಬಿಐ ತನಿಖೆ ಆಗಬೇಕು. ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಈ ಪ್ರಕರಣದಲ್ಲಿ ಎಷ್ಟು ಬೇಕೋ ಅಷ್ಟೇ ಮಾತಾಡ್ತಿದ್ದೇವೆ. ಇನ್ನೂ ಡೀಪಾಗಿ ಹೋಗಬೇಕು ಅಂದ್ರೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕಾಗುತ್ತೆ. ನಾವು ವೈಯಕ್ತಿಕ ಟೀಕೆ ಯಾರ ಮೇಲೂ ಮಾಡ್ತಿಲ್ಲ, ಇದರ ರೂವಾರಿ ಯಾರು ಅಂತ ಗೊತ್ತಾಗಬೇಕು ಎಂದು ಒತ್ತಾಯಿಸಿದರು.
