Ambulance service within 20 minutes of call: New system implemented from December – 108 ಆಂಬ್ಯುಲೆನ್ಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ಮುಂದಾಗಿದೆ. ಫೋನ್ ಕರೆ ಮಾಡಿದ 20 ನಿಮಿಷದಲ್ಲಿ ಆಂಬ್ಯುಲೆನ್ಸ್ ಸೇವೆ ಲಭ್ಯ ಇರುವಂತೆ ನೋಡಿಕೊಳ್ಳಲು ಡಿಸೆಂಬರ್ನಿಂದ ಹೊಸ ವ್ಯವಸ್ಥೆ ಜಾರಿಗೆ ತರಲಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅವರು ತಿಳಿಸಿದ್ದಾರೆ. ದೂರದ ಗ್ರಾಮಗಳ ರೋಗಿಗಳಿಗೆ ತುರ್ತು ಚಿಕಿತ್ಸೆ ಶೀಘ್ರ ದೊರೆಯುವಂತೆ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
- 108 ಆಂಬ್ಯುಲೆನ್ಸ್ ಸಮಸ್ಯೆಯ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆ ಜಾರಿಗೆ.
- ಫೋನ್ ಕರೆ ಮಾಡಿದ 20 ನಿಮಿಷದಲ್ಲಿ ಆಂಬ್ಯುಲೆನ್ಸ್ ಸೇವೆ ಲಭ್ಯ.
- ಡಿಸೆಂಬರ್ನಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದ ಆರೋಗ್ಯ ಸಚಿವ ಯುಟಿ ಖಾದರ್.
![]()
ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕರೆ ಬಂದ 20 ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವ ಹೊಸ ವ್ಯವಸ್ಥೆ ರೂಪಿಸಲಾಗು ವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, “ಹೊಸ ವ್ಯವಸ್ಥೆ ಡಿಸೆಂಬರ್ನಿಂದ ಜಾರಿಗೆ ಬರಲಿದೆ. ಕರೆ ಬಂದ 20 ನಿಮಿಷದೊಳಗೆ ಸ್ಥಳಕ್ಕೆ ಆಂಬ್ಯುಲೆನ್ಸ್ ತಲುಪದಿದ್ದರೆ ದಂಡ ವಿಧಿಸುವ ಚಿಂತನೆ ಇದೆ. ಗ್ರಾಮೀಣ ಪ್ರದೇಶದಲ್ಲಿ ತುರ್ತು ಆರೋಗ್ಯ ಸೇವೆಯನ್ನು ವೇಗಗೊಳಿಸುವುದು ನಮ್ಮ ಉದ್ದೇಶ. ದೂರದ ಗ್ರಾಮಗಳ ರೋಗಿಗಳಿಗೆ ತುರ್ತು ಚಿಕಿತ್ಸೆ ಶೀಘ್ರ ದೊರೆಯುವಂತೆ ಮಾಡಲಾಗುವುದು,” ಎಂದು ಹೇಳಿದರು.
ಗ್ರಾಮೀಣ ಭಾಗದ ಜನರು ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಲು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 5 ಬೆಡ್ಗಳ ಐಸಿಯು ಸೌಲಭ್ಯ ಅಭಿವೃದ್ಧಿಪಡಿಸಲಾಗುವುದು. ಹೆಚ್ಚಿನ ಚಿಕಿತ್ಸೆ ಅಲ್ಲಿಯೇ ಸಾಧ್ಯವಾಗಿಸಲು ಟೆಲಿಮೆಡಿಸಿನ್ ಸೇರಿದಂತೆ ಆಧುನಿಕ ಸೌಲಭ್ಯ ವಿಸ್ತರಿಸಲಾಗುವುದು. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ನೀಗಿಸಲು 1,000 ವೈದ್ಯರು ಮತ್ತು ನರ್ಸ್ಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ,” ಎಂದು ವಿವರಿಸಿದರು.
ಎಚ್ಚರಿಕೆ ನೀಡಿದ್ದ ಖಾದರ್ : 108 ಆಂಬ್ಯುಲೆನ್ಸ್ ಸಮಸ್ಯೆ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಕೆ ನೀಡಿದ್ದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರದ ಕರೆ ನೀಡಿದ್ದರು. ಈ ವೇಳೆ 108 ಆಂಬ್ಯುಲೆನ್ಸ್ ಸಿಬ್ಬಂದಿ ಮುಷ್ಕರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಅವರು ಎಚ್ಚರಿಕೆಯನ್ನು ನೀಡಿದ್ದರು.
108 ಆಂಬ್ಯುಲೆನ್ಸ್ ವ್ಯವಸ್ಥೆಗೆ ಯಾರೂ ಅವಲಂಬಿತವಾಗಿಲ್ಲ. ಬ್ಲ್ಯಾಕ್ ಮೇಲ್ನಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದು ಅವರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅವಲಂಬನೆ ಆಗ್ಬೇಡಿ : 108 ಆ್ಯಂಬುಲೆನ್ಸ್ ಮೇಲೆ ಜನ ಅವಲಂಬನೆ ಆಗುವುದು ಬೇಡ. ಈಗಲೂ 108 ಆ್ಯಂಬುಲೆನ್ಸ್ನಿಂದ ಏನೂ ಪ್ರಯೋಜನ ಆಗುತ್ತಿಲ್ಲ. ಫೋನ್ ಕರೆ ಮಾಡಿದ ಬಳಿಕ ಅವರು ಸ್ಥಳಕ್ಕೆ ತಲುಪುವಾದ ಈಗಲೂ 45-50 ನಿಮಿಷ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ನಮಗೆ 2 ತಿಂಗಳು ಸಮಯಾವಕಾಶ ಕೊಡಿ. ಎರಡು ತಿಂಗಳಲ್ಲಿ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆ ಎಂದಿದ್ದರು.
ಆಂಬ್ಯುಲೆನ್ಸ್ ಸಿಬ್ಬಂದಿ ಬೆದರಿಕೆಗೆ ನಾವು ಹೆದರಲ್ಲ. ಬದಲಾಗಿ ಹೊಸ ಅತ್ಯುತ್ತಮ ವ್ಯವಸ್ಥೆಯನ್ನು ನಾವು ಜಾರಿಗೆ ತರುತ್ತೇವೆ. ಹಾಗಾಗಿ 108 ಆ್ಯಂಬುಲೆನ್ಸ್ ಸೇವೆಯನ್ನು ನಂಬಬೇಡಿ ಎಂದು ರಾಜ್ಯದ ಜನರಿಗೆ ಆರೋಗ್ಯ ಸಚಿವ ಯು ಟಿ ಖಾದರ್ ಮನವಿ ಮಾಡಿದ್ದರು.
