Actor Srirajan, who is part of the ‘Original Monster’ (OM) team, is participating in the film directed by R. Chandru and starring Shivarajkumar in the lead role – ‘ಕಬ್ಜ’ ಚಿತ್ರದ ನಂತರ ಆರ್. ಚಂದ್ರು ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಒರಿಜಿನಲ್ ಮಾನ್ಸ್ಟರ್’ (OM) ಚಿತ್ರತಂಡಕ್ಕೆ ನಟ ಶ್ರೀರಾಜನ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಅವರು ಭಾಗವಹಿಸುತ್ತಿದ್ದಾರೆ
ಆನಂದ್ ಪಂಡಿತ್ ಅರ್ಪಿಸುವ ಈ ಚಿತ್ರವನ್ನು ಆರ್.ಸಿ. ಸ್ಟುಡಿಯೋಸ್ ಲಾಂಛನದಲ್ಲಿ ಯಮುನಾ ಚಂದ್ರು ನಿರ್ಮಿಸುತ್ತಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಸುನೀಲ್, ಯೋಗಿಬಾಬು ಹಾಗೂ ವಸಿಷ್ಠ ಸಿಂಹ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.
ಇತ್ತೀಚೆಗಷ್ಟೇ ಶ್ರೀರಾಜನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಆರ್.ಸಿ. ಸ್ಟುಡಿಯೋಸ್ ಸಂಸ್ಥೆಯು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಶುಭಾಶಯ ಕೋರಿದೆ.
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಶ್ರೀರಾಜನ್
‘ಮಹಾಮಾಯಿ’, ‘ಕಾದಂಬರಿ’, ‘ಕನ್ಯಾದಾನ’, ‘ಅಪ್ಪ’, ‘ಒಂದೇ ಬಳ್ಳಿಯ ಹೂಗಳು’, ‘ಕುಸುಮಾಂಜಲಿ’, ‘ಮನೆಯೊಂದು ಮೂರು ಬಾಗಿಲು’ ಹಾಗೂ ‘ಪುರುಷೋತ್ತಮ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಶ್ರೀರಾಜನ್ ನಟಿಸಿದ್ದಾರೆ. ಸದ್ಯ ಸುವರ್ಣ ವಾಹಿನಿಯ ‘ಅನಾಥ ನಿಲಯ’ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
‘ಅಭಿ’, ‘ಮೆಜೆಸ್ಟಿಕ್’ ಹಾಗೂ ‘ಚಿಗುರಿದ ಕನಸು’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಅವರು, ‘ರೌಡಿ ಹೃದಯ’ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಅಲ್ಲದೆ, ‘ಸೈ’, ‘ಹಾಕು ಹೆಜ್ಜೆ ಹಾಕು’ ಹಾಗೂ ‘ಡಿ ಫಾರ್ ಡೇಂಜರ್’ ಮುಂತಾದ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ.
ಕಿರುತೆರೆ, ಹಿರಿತೆರೆ ಹಾಗೂ ರಿಯಾಲಿಟಿ ಶೋಗಳು ಸೇರಿದಂತೆ 30ಕ್ಕೂ ಹೆಚ್ಚು ಯೋಜನೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿರುವ ಶ್ರೀರಾಜನ್, ಇದೀಗ ‘ಒರಿಜಿನಲ್ ಮಾನ್ಸ್ಟರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

