ಶ್ರೀ ಶರಣಬಸವೇಶ್ವರ ಪೀಠಾಧಿಪತಿ ತಮ್ಮ 91ನೇ ವರ್ಷದಲ್ಲಿ ಲಿಂಗೈಕ್ಯ |ಪ್ರಿಯಾಂಕ್ ಖರ್ಗೆ ಸಂತಾಪ

ಕಲಬುರ್ಗಿ : ಶರಣರ ನಾಡಾದ ಕಲಬುರಗಿಯಲ್ಲಿ ಶರಣ ಪರಂಪರೆಯ ಪ್ರಮುಖ ಕೇಂದ್ರವಾಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಶರಣಬಸಪ್ಪ ಅಪ್ಪಾರವರು ಲಿಂಗೈಕ್ಯರಾಗಿರುವುದು ಅತೀವ ನೋವಿನ ವಿಷಯವಾಗಿದೆ.
ಕಾಯಕ ಜೀವಿಯಾಗಿ, ಮಹಾ ದಾಸೋಹಿಯಾಗಿ, ಶರಣಪರಂಪರೆಯ ಉದಾತ್ತ ಚಿಂತನೆಗಳ ವಕ್ತಾರರಾಗಿ, ಕಲಬುರಗಿ ಜನತೆಗೆ ತಾತ್ವಿಕ ಮಾರ್ಗದರ್ಶಕರಾಗಿದ್ದ ಶ್ರೀಗಳು ಸಮಸ್ತ ಜನರ ಏಳಿಗೆ ಬಯಸುತ್ತಾ, ಜಿಲ್ಲೆಯ ಸೌಹಾರ್ಧ ಪರಂಪರೆಗೆ ಶಕ್ತಿಯಾಗಿದ್ದರು. ನಾನು ಅವರಿಂದ ರಾಜಕೀಯ ಮೌಲ್ಯಗಳ, ಬದುಕಿನ ಮೌಲ್ಯಗಳ ಅರಿವನ್ನು ಪಡೆದಿದ್ದೇನೆ, ನನಗೆ ಅವರು ಬಹುದೊಡ್ಡ ಪ್ರೇರಕ ಶಕ್ತಿಯಾಗಿ, ಮಾರ್ಗದರ್ಶಕರಾಗಿ ಮುನ್ನಡೆಸಿದವರಾಗಿದ್ದರು, ಇಂದು ಅವರಿಲ್ಲ ಎಂದು ಕಲ್ಪಿಸಿಕೊಳ್ಳುವುದು ನನಗೆ ಅತ್ಯಂತ ಕಷ್ಟದ ಸನ್ನಿವೇಶ.
ಬಂದೆನವಾಜ್ ದರ್ಗಾದ ಡಾ. ಸಯ್ಯದ್ ಶಾ ಖುಸ್ರೋ ಹುಸೇನಿಯವರು ಮತ್ತು ಶರಣಬಸವೇಶ್ವರ ಮಠದ ಪೂಜ್ಯ ಶರಣಬಸಪ್ಪ ಅಪ್ಪಾ ಈ ಇಬ್ಬರೂ ಕಲಬುರಗಿಯ ಭಾವೈಕ್ಯತೆಗೆ ಎರಡು ಕಣ್ಣುಗಳಂತಿದ್ದವರು, ಒಂದು ವರ್ಷದ ಅವಧಿಯಲ್ಲಿ ಈ ಇಬ್ಬರೂ ಮಹನೀಯರನ್ನು ಕಳೆದುಕೊಳ್ಳುವ ಮೂಲಕ ಎರಡು ಕಣ್ಣುಗಳನ್ನು ಕಳೆದುಕೊಂಡು ಕತ್ತಲಲ್ಲಿ ನಿಂತಂತೆ ಭಾಸವಾಗುತ್ತಿದೆ. ಸದಾ ಸಮಾಜದ ಹಿತವನ್ನು ಬಯಸುತ್ತಿದ್ದ ಶ್ರೀ ಡಾ. ಶರಣಬಸಪ್ಪಾ ಅಪ್ಪ ಅವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾದುದು, ವಿದ್ಯೆ ಎಂಬುದು ಅಭ್ಯಾಸಿಗನ ಕೈವಶ. ಅದು ಕೇವಲ ಉಳ್ಳವರ ಸ್ವತ್ತಲ್ಲ ಎಂಬ ಆಶಯದೊಂದಿಗೆ ತಮ್ಮ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸರ್ವರಿಗೂ ಜ್ಞಾನದಾಸೋಹ ನೀಡಿದ್ದಾರೆ.91 ವರ್ಷಗಳ ತುಂಬು ಜೀವನದಲ್ಲಿ ಅವರು ಸಮಾಜಕ್ಕೆ ನೀಡಿದ್ದು ಅಪಾರ
