ದೆಹಲಿ ಸಿಎಂ ರೇಖಾ ಗುಪ್ತಾಗೆ ಅನಾಮಿಕ ವ್ಯಕ್ತಿಯಿಂದ ಹಲ್ಲೆಗೆ ಯತ್ನ

ದೆಹಲಿ : ಆಗಸ್ಟ್ 20ರಂದು ಬೆಳಿಗ್ಗೆ ಮನವಿ ಪತ್ರ ಸಲ್ಲಿಸಲು ಬಂದ ವ್ಯಕ್ತಿಯೊಬ್ಬನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆಸಿದ್ದಾನೆ.ಇಲ್ಲಿನ ಸಿವಿಲ್ ಲೈನ್ನಲ್ಲಿರುವ ಅಧಿಕೃತ ನಿವಾಸದಲ್ಲಿ ನಡೆದ ಜನ್ ಸುನ್ವೈ ಕಾರ್ಯಕ್ರಮದ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ ನಡೆದಿದೆ ಎಂದು ಬಿಜೆಪಿ ತಿಳಿಸಿದೆ.ಜನ ಸಂದರ್ಶನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ, ವ್ಯಕ್ತಿ ಕೆಲವು ಕಾಗದ ಪತ್ರಗಳೊಂದಿಗೆ ಬಂದಿದ್ದ. ಮನವಿ ಕೊಡುವ ನೆಪದಲ್ಲಿ ಬಂದು ಏಕಾಏಕಿ ಕೂಗಾಡಿ, ಸಿಎಂ ರೇಖಾ ಗುಪ್ತಾರಿಗೆ ಕಪಾಳಮೋಕ್ಷ ಮಾಡಿದ್ದಾನೆ. ಕೂಡಲೇ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ವ್ಯಕ್ತಿಯನ್ನು ಬಂಧಿಸಿ ,ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಾರ್ವಜನಿಕ ಮನವಿ ವಿಚಾರಣೆಯ ಸಮಯದಲ್ಲಿ ಅವರು ಮೊದಲು ಸುಮಾರು 35 ವರ್ಷದ ವ್ಯಕ್ತಿ ಸಿಎಂಗೆ ಕೆಲವು ದಾಖಲೆಗಳನ್ನು ನೀಡಿದರು ಮತ್ತು ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಹೇಳಿದರು. ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ ಮುಖ್ಯಮಂತ್ರಿಯ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದ್ದಾರೆ
