ಅಕ್ರಮ ಬೆಟ್ಟಿಂಗ್ ಕಂಪನಿಯ ಹಣ ವರ್ಗಾವಣೆ ಸಂಬಂಧ ಸಿಕ್ಕಿಂನಲ್ಲಿ ಕಾಂಗ್ರೆಸ್ ಶಾಸಕ ಬಂಧನ
ಬೆಂಗಳೂರು:ಅಕ್ರಮವಾಗಿ ಆನ್ಲೈನ್ ಮತ್ತು ಆಫ್ಲೈನ್ ಬೆಟ್ಟಿಂಗ್ ಕಂಪನಿ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ (ಪಪ್ಪಿ) ಅವರನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ. ಶುಕ್ರವಾರ ಹಲವು ರಾಜ್ಯಗಳಲ್ಲಿ ನಡೆಸಿದ ದಾಳಿಯ ನಂತರ 12 ಕೋಟಿ ರೂ. ನಗದು, 6 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಸುಮಾರು 10 ಕೆಜಿ ಬೆಳ್ಳಿ ಮತ್ತು ನಾಲ್ಕು ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಕೇಂದ್ರದ ತನಿಖಾ ಸಂಸ್ಥೆ ತಿಳಿಸಿದೆ.ಚಿತ್ರದುರ್ಗದ 50 ವರ್ಷದ ಶಾಸಕರನ್ನು ಶುಕ್ರವಾರ ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್ನಲ್ಲಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು ಮತ್ತು ಬೆಂಗಳೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ ಪಡೆಯಲಾಯಿತು ಎಂದು ಅದು ಹೇಳಿದೆ.ಶಾಸಕರು ತಮ್ಮ ಸಹಚರರೊಂದಿಗೆ ಕ್ಯಾಸಿನೊವನ್ನು ಗುತ್ತಿಗೆ ಪಡೆಯುವ ಸಲುವಾಗಿ ಮಾತುಕತೆ ನಡೆಸಲು ಗ್ಯಾಂಗ್ಟಾಕ್ಗೆ ಭೇಟಿ ನೀಡಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.ವೀರೇಂದ್ರ ಅವರ ಸಹೋದರ ಕೆಸಿ ನಾಗರಾಜ್ ಮತ್ತು ಅವರ ಮಗ ಪೃಥ್ವಿ ಎನ್ ರಾಜ್ ಅವರ ನಿವಾಸದಿಂದ ಆಸ್ತಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಸಹೋದರ ಕೆಸಿ ತಿಪ್ಪೇಸ್ವಾಮಿ ಮತ್ತು ಅವರ ಇತರ ಸಹಚರರು ದುಬೈನಿಂದ ಆನ್ಲೈನ್ ಗೇಮಿಂಗ್ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾರೆ’ ಎಂದು ಇ.ಡಿ ತಿಳಿಸಿದೆ.
