ಚಾಮರಾಜನಗರ :ಚಾಮರಾಜನಗರದ ಹನೂರು ತಾಲ್ಲೂಕಿನ ಕಾಂಚಳ್ಳಿ ಗ್ರಾ ಮದ ಜಮೀನಿನ ಬಳಿ ಮಂಗಳವಾರ ಕಬ್ಬು ಕಟಾವು ಮಾಡುತ್ತಿರುವ ವೇಳೆ ಚಿರತೆ ಮರಿಗಳು ಪ್ರತ್ಯಕ್ಷವಾಗಿವೆ. ಇದರಿಂದ ರೈತರು ಭಯಭೀತರಾಗಿ ಹೌಹಾರಿದ್ದಾರೆ. ಬಸಪ್ಪನದೊಡ್ಡಿ ಗ್ರಾಮದ ಪ್ರಕಾಶ್ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ ರೈತರು ಎರಡು ಚಿರತೆ ಮರಿಗಳನ್ನು ಕಂಡು ಹೆದರಿದ್ದಾರೆ. ಜಮೀನಿನಲ್ಲಿ ಚಿರತೆ ಮರಿಗಳು ಪತ್ತೆಯಾದ ಮಾಹಿತಿ ತಿಳಿದ ತಕ್ಷಣ ಹನೂರಿನ ಬಫರ್ ಅರಣ್ಯ ವಲಯದ ಸಿಬ್ಬಂಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮರಿಗಳನ್ನು ಸುರಕ್ಷಿತವಾಗಿ ಅವುಗಳನ್ನು ತಾಯಿ ಚಿರತೆ ಬಳಿ ಸೇರಿಸುವ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸ್ಥಳೀಯರು ಮತ್ತು ರೈತರು ಮರಿಗಳ ತಾಯಿ ಚಿರತೆಯನ್ನು ಹುಡುಕಿ ಅದರ ಬಳಿ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ಗುಂಡಾಪುರ, ಬಸಪ್ಪನದೊಡ್ಡಿ, ಗಂಗನದೊಡ್ಡಿ ಭಾಗಗಳಲ್ಲಿ ಈ ಹಿಂದೆ ಚಿರತೆ ಪ್ರತ್ಯಕ್ಷಗೊಂಡಿದ್ದವು. ಊರಿನ ಸಾಕು ಪ್ರಾಣಿಗಳಾದ ಕುರಿ, ಮೇಕೆ, ನಾಯಿ ಸೇರಿದಂತೆ ಸಾಕು ಪ್ರಾಣಿಗಳನ್ನು ಬಲಿ ಪಡೆದುಕೊಂಡಿದೆ. ಸದ್ಯ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯ ರೈತ ಸಂಘವು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
