ಮಂಡ್ಯದ ರಾಜಕೀಯ ವಲಯದಲ್ಲಿ ಆಡಿಯೋ ಬಾಂಬ್ ಒಂದು ಭಾರೀ ಸದ್ದು ಮಾಡುತ್ತಿದೆ. ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರದ್ದು ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ, ವಿಶೇಷವಾಗಿ ಹಳೆ ಮೈಸೂರು ಭಾಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.
ಜೆಡಿಎಸ್ ಕಾರ್ಯಕರ್ತನೊಬ್ಬನ ಜೊತೆಗಿನ ಸಂಭಾಷಣೆ ಎನ್ನಲಾದ ಈ ಆಡಿಯೋದಲ್ಲಿ, ಶಿವರಾಮೇಗೌಡರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುಮಾರಸ್ವಾಮಿ ವಿರುದ್ಧ 36 ಕೋಟಿ ರೂ. ಆರೋಪ
ವೈರಲ್ ಆಗಿರುವ ಆಡಿಯೋದಲ್ಲಿ ಪ್ರಮುಖವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಲೋಕಸಭೆ ಉಪಚುನಾವಣೆಯ ಸಂದರ್ಭದಲ್ಲಿ ತಮಗೆ ಟಿಕೆಟ್ ನೀಡಿ, ಚುನಾವಣಾ ವೆಚ್ಚದ ಹೆಸರಿನಲ್ಲಿ ಬರೋಬ್ಬರಿ 36 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಸಿದರು ಎಂದು ಶಿವರಾಮೇಗೌಡರು ದೂರಿದ್ದಾರೆ. “ನನ್ನಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡಿಸಿ, ನಂತರ ನನಗೆ ಟಿಕೆಟ್ ನೀಡದೇ ಮೋಸ ಮಾಡಿದರು,” ಎಂದು ಅವರು ಏಕವಚನದಲ್ಲಿಯೇ ಕುಮಾರಸ್ವಾಮಿ ಅವರನ್ನು ನಿಂದಿಸಿರುವುದು ಆಡಿಯೋದಲ್ಲಿ ದಾಖಲಾಗಿದೆ ಎನ್ನಲಾಗಿದೆ. ಜೆಡಿಎಸ್ ಪಕ್ಷದಲ್ಲಿ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡುತ್ತಿಲ್ಲ, ಕುಮಾರಸ್ವಾಮಿ ಕೇವಲ ತಮ್ಮ ಕುಟುಂಬದ ಹಿತಾಸಕ್ತಿಯನ್ನು ಮಾತ್ರ ನೋಡಿಕೊಳ್ಳುತ್ತಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.
ದಿವಂಗತ ಅಂಬರೀಶ್ ಬಗ್ಗೆ ಅವಾಚ್ಯ ಶಬ್ದ
ಎಲ್ಲಕ್ಕಿಂತ ಹೆಚ್ಚಾಗಿ, ಮಂಡ್ಯದ ಜನಮಾನಸದಲ್ಲಿ ದೈವತ್ವಕ್ಕೇರಿರುವ ದಿವಂಗತ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಬಗ್ಗೆ ಶಿವರಾಮೇಗೌಡರು ಆಡಿರುವ ಮಾತುಗಳು ಅಂಬರೀಶ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. “ಅಂಬರೀಶ್ ಅವರನ್ನು ಕಾಂಗ್ರೆಸ್ಗೆ ಕರೆತಂದಿದ್ದೇ ನಾನು. ಆದರೆ ಅವರು ನನ್ನನ್ನು ತೊಳೆದುಬಿಟ್ಟು ಹೋದರು,” ಎಂದು ಹೇಳುವ ಭರದಲ್ಲಿ, ಅಂಬರೀಶ್ ಅವರ ಬಗ್ಗೆ ಅತ್ಯಂತ ಅಶ್ಲೀಲ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಮೃತ ವ್ಯಕ್ತಿಯೊಬ್ಬರ ಬಗ್ಗೆ, ಅದೂ ಮಂಡ್ಯದ ‘ಗಂಡು’ ಎಂದು ಕರೆಯಲ್ಪಡುವ ನಾಯಕನ ಬಗ್ಗೆ ಇಂತಹ ಪದಪ್ರಯೋಗ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆಗೆ ವ್ಯಕ್ತವಾಗುತ್ತಿದೆ.
ಶಿವರಾಮೇಗೌಡರ ಆಕ್ರೋಶ ಕೇವಲ ಕುಮಾರಸ್ವಾಮಿ ಮತ್ತು ಅಂಬರೀಶ್ ಅವರಿಗೆ ಸೀಮಿತವಾಗಿಲ್ಲ. ಆಡಿಯೋದಲ್ಲಿ ಅವರು ಸಚಿವ ಚಲುವರಾಯಸ್ವಾಮಿ, ಮಾಜಿ ಸಂಸದ ದಿವಂಗತ ಮಾದೇಗೌಡ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಅವರ ವಿರುದ್ಧವೂ ಹರಿಹಾಯ್ದಿದ್ದಾರೆ. ಮಾದೇಗೌಡರಂತಹ ಹಿರಿಯ ನಾಯಕರ ಬಗ್ಗೆಯೂ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ರಾಜಕೀಯ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಮಂಡ್ಯದ ರಾಜಕೀಯ ನಾಯಕರನ್ನು “ಗಂಡಸರಲ್ಲ, ಕೈಗೆ ಬಳೆ ತೊಟ್ಟುಕೊಳ್ಳಿ” ಎಂದು ಹೀಯಾಳಿಸಿರುವುದು ಕೂಡ ಆಡಿಯೋದಲ್ಲಿ ಕೇಳಿಬಂದಿದೆ.
