ಕೊಯಮತ್ತೂರಿನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) 2026ರ ಫೈನಲ್ ಪಂದ್ಯದಲ್ಲಿ ಕಿಚ್ಚ ಸುದೀಪ್ ನೇತೃತ್ವದ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬೆಂಗಾಲ್ ಟೈಗರ್ಸ್ ವಿರುದ್ಧದ ಅಂತಿಮ ಹಣಾಹಣಿಯಲ್ಲಿ 6 ವಿಕೆಟ್ಗಳ ಅಂತರದ ಗೆಲುವು ಸಾಧಿಸುವ ಮೂಲಕ ಕರ್ನಾಟಕ ತಂಡ 3ನೇ ಬಾರಿಗೆ ಸಿಸಿಎಲ್ ಟ್ರೋಫಿಗೆ ಮುತ್ತಿಟ್ಟಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್, ಕರ್ನಾಟಕದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿತು. ನಿಗದಿತ 20 ಓವರ್ಗಳಲ್ಲಿ ಬೆಂಗಾಲ್ ಟೈಗರ್ಸ್ 129 ರನ್ಗಳಿಗೆ ಆಲೌಟ್ ಆಯಿತು. ಬೆಂಗಾಲ್ ಪರ ಜಾಯ್ ಕುಮಾರ್ ಮುಖರ್ಜಿ (54) ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಕರ್ನಾಟಕದ ಪರ ಪ್ರತಾಪ್ ಅದ್ಭುತ ಬೌಲಿಂಗ್ ನಡೆಸಿ ಎದುರಾಳಿಗಳ ರನ್ ವೇಗಕ್ಕೆ ಕಡಿವಾಣ ಹಾಕಿದರು.
130 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಕರ್ನಾಟಕ ಬುಲ್ಡೋಜರ್ಸ್ ಆರಂಭದಲ್ಲೇ ಆಘಾತ ಅನುಭವಿಸಿದರೂ, ನಂತರ ಬಂದ ರಾಜೀವ್ ಹನು ಪಂದ್ಯದ ಗತಿಯನ್ನೇ ಬದಲಿಸಿದರು. ಕೇವಲ 35 ಎಸೆತಗಳಲ್ಲಿ 69 ರನ್ ಸಿಡಿಸಿದ ರಾಜೀವ್, ತಂಡದ ಗೆಲುವನ್ನು ಸುಲಭವಾಗಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು 16.4 ಓವರ್ಗಳಲ್ಲೇ 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ವಿಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಕರ್ನಾಟಕ ಬುಲ್ಡೋಜರ್ಸ್ 12 ವರ್ಷಗಳ ಬಳಿಕ ಮತ್ತೆ ಟ್ರೋಫಿ ಗೆದ್ದ ಸಾಧನೆ ಮಾಡಿದೆ (2013 ಮತ್ತು 2014ರ ನಂತರ). ಪಂದ್ಯದ ಶ್ರೇಷ್ಠ ಆಟಗಾರನಾಗಿ ರಾಜೀವ್ ಹನು ಹೊರಹೊಮ್ಮಿದರು.
