ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ (Tax Devolution) ತಾರತಮ್ಯ ಮಾಡುತ್ತಿದೆ ಮತ್ತು ರಾಜ್ಯಕ್ಕೆ ಬರಬೇಕಾದ ಪಾಲನ್ನು ಕಡಿತಗೊಳಿಸಿದೆ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದ್ದಾರೆ. “ರಾಜ್ಯ ಸರ್ಕಾರದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ, ವಾಸ್ತವವಾಗಿ ಕೇಂದ್ರ ಸರ್ಕಾರವು ಕರ್ನಾಟಕದ ತೆರಿಗೆ ಪಾಲನ್ನು ಶೇ. 4.131 ಕ್ಕೆ ಹೆಚ್ಚಳ ಮಾಡಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಅನ್ಯಾಯ’ದ ರಾಗ ಸುಳ್ಳು:
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪದೇ ಪದೇ ಕೇಂದ್ರದ ವಿರುದ್ಧ ಮಾಡುತ್ತಿರುವ ‘ಹಣಕಾಸಿನ ಅನ್ಯಾಯ’ದ ಆರೋಪ ರಾಜಕೀಯ ಪ್ರೇರಿತ ಎಂದು ಜೋಶಿ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯುಪಿಎ ಸರ್ಕಾರದ ಅವಧಿಗೆ ಹೋಲಿಸಿದರೆ ಎನ್ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿ ಹೆಚ್ಚು ಅನುದಾನ ಮತ್ತು ತೆರಿಗೆ ಪಾಲು ಬಂದಿದೆ. ಹಣಕಾಸು ಆಯೋಗದ (Finance Commission) ಶಿಫಾರಸಿನಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಈಗ ರಾಜ್ಯದ ಪಾಲನ್ನು ಶೇ. 4.131 ಕ್ಕೆ ಏರಿಸಲಾಗಿದೆ. ಇದನ್ನು ಮರೆಮಾಚಿ ರಾಜ್ಯ ಸರ್ಕಾರ ಸುಳ್ಳು ಸುದ್ದಿ ಹಬ್ಬಿಸುತ್ತಿದೆ,” ಎಂದು ಆಕ್ಷೇಪಿಸಿದರು.
ಖಜಾನೆ ಖಾಲಿ, ಕೇಂದ್ರದ ಮೇಲೆ ಗೂಬೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಹಣ ಇಲ್ಲದಂತಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿದೆ. ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದರು. “ತಮ್ಮ ಆರ್ಥಿಕ ಅಶಿಸ್ತನ್ನು ಮುಚ್ಚಿಕೊಳ್ಳಲು ‘ಕೇಂದ್ರದ ಅನ್ಯಾಯ’ ಎಂಬ ಬೋರ್ಡ್ ನೇತುಹಾಕಿಕೊಂಡಿದ್ದಾರೆ,” ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ | ಐತಿಹಾಸಿಕ ಲಕ್ಕುಂಡಿಗೆ ವಿದೇಶಿ ಸ್ಪರ್ಶ: ಡೆಕ್ಕನ್ ಹೆರಿಟೇಜ್ ಫೌಂಡೇಶನ್ನಿಂದ ಅಭಿವೃದ್ಧಿಯ ಹಾದಿ!
ರೈಲ್ವೆ ಮತ್ತು ಹೆದ್ದಾರಿಗೂ ದಾಖಲೆ ಅನುದಾನ:
ಕೇವಲ ತೆರಿಗೆ ಪಾಲು ಮಾತ್ರವಲ್ಲದೆ, ರೈಲ್ವೆ ಯೋಜನೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರೂಪಾಯಿ ಅನುದಾನ ನೀಡಿದೆ. ಯುಪಿಎ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 800-900 ಕೋಟಿ ರೂ. ಸಿಗುತ್ತಿದ್ದ ರೈಲ್ವೆ ಅನುದಾನ, ಈಗ ಮೋದಿ ಸರ್ಕಾರದಲ್ಲಿ 7,000 ಕೋಟಿಗೂ ಅಧಿಕವಾಗಿದೆ. ಹೀಗಿದ್ದರೂ ಅನ್ಯಾಯ ಎಂದು ಬೊಬ್ಬೆ ಹೊಡೆಯುವುದು ಎಷ್ಟು ಸರಿ? ಎಂದು ಜೋಶಿ ಪ್ರಶ್ನಿಸಿದರು.
