ನವದೆಹಲಿ (ಫೆ. 03, 2026): ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಇಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಮಾತನಾಡಲು ಎದ್ದು ನಿಂತಾಗ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಭಾರೀ ಗದ್ದಲ ಏರ್ಪಟ್ಟು, ಲೋಕಸಭೆ ರಣರಂಗವಾಗಿ ಮಾರ್ಪಟ್ಟಿತು.
ಚೀನಾ ಗಡಿ ಸಂಘರ್ಷ ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ನೂತನ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಲು ರಾಹುಲ್ ಪ್ರಯತ್ನಿಸಿದಾಗ, ಆಡಳಿತ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುವ ಮೂಲಕ ಅಡ್ಡಿಪಡಿಸಿದರು.
“ನಾನು ವಿಪಕ್ಷ ನಾಯಕ, ಇದು ನನ್ನ ಹಕ್ಕು”:
ಸತತವಾಗಿ ಅಡ್ಡಿಪಡಿಸಿದ್ದರಿಂದ ಕೆರಳಿದ ರಾಹುಲ್ ಗಾಂಧಿ, ಸ್ಪೀಕರ್ ಓಂ ಬಿರ್ಲಾ ಅವರತ್ತ ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ಈ ಸದನದ ವಿರೋಧ ಪಕ್ಷದ ನಾಯಕ (Leader of Opposition). ಜನರ ದ್ವನಿಯಾಗಿ ಮಾತನಾಡುವುದು ನನ್ನ ಹಕ್ಕು. ಆದರೆ ಮೈಕ್ ಆಫ್ ಮಾಡುವ ಮೂಲಕ ಅಥವಾ ಗದ್ದಲ ಎಬ್ಬಿಸುವ ಮೂಲಕ ನನ್ನ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನದ ಪ್ರತಿಯನ್ನು ಹಿಡಿದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಮೆರಿಕದ ಜೊತೆ ‘ರಾಜಿ’ ಆರೋಪ:
ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದರು. “ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ತೀವ್ರ ಒತ್ತಡಕ್ಕೆ ಮಣಿದಿದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ತೈಲವನ್ನು ನಿಲ್ಲಿಸಿ, ಅಮೆರಿಕ ಮತ್ತು ವೆನೆಜುವೆಲಾದಿಂದ ತೈಲ ಖರೀದಿಸಲು ಒಪ್ಪಿರುವುದು ದೇಶದ ಹಿತಾಸಕ್ತಿಗೆ ಮಾರಕ. ಇದು ರಾಜತಾಂತ್ರಿಕ ಗೆಲುವಲ್ಲ, ಬದಲಿಗೆ ಅಮೆರಿಕದ ಮುಂದೆ ಮಾಡಿಕೊಂಡಿರುವ ರಾಜಿ (Compromise),” ಎಂದು ರಾಹುಲ್ ಟೀಕಿಸಿದರು. 500 ಬಿಲಿಯನ್ ಡಾಲರ್ ಹಣವನ್ನು ಅಮೆರಿಕದ ಮಾರುಕಟ್ಟೆಗೆ ಸುರಿಯುವ ನಿರ್ಧಾರವನ್ನು ಅವರು ಪ್ರಶ್ನಿಸಿದರು.
ಇದನ್ನೂ ಓದಿ | ಭಾರತದ ಮೇಲಿನ ಸುಂಕ 25%ರಿಂದ 18%ಕ್ಕೆ ಇಳಿಕೆ: ಟ್ರಂಪ್ ಘೋಷಣೆ
ಚೀನಾ ವಿಚಾರದಲ್ಲಿ ಮೌನವೇಕೆ?
ಇದೇ ವೇಳೆ ಚೀನಾ ಗಡಿ ವಿಚಾರವನ್ನೂ ಪ್ರಸ್ತಾಪಿಸಿದ ಅವರು, “ಒಂದೆಡೆ ಅಮೆರಿಕದ ಒತ್ತಡಕ್ಕೆ ಮಣಿಯುತ್ತಿದ್ದೀರಿ, ಮತ್ತೊಂದೆಡೆ ಚೀನಾ ನಮ್ಮ ಭೂಮಿಯನ್ನು ಕಬಳಿಸುತ್ತಿದ್ದರೂ ಮೌನವಾಗಿದ್ದೀರಿ,” ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಮಾಜಿ ಸೇನಾ ಮುಖ್ಯಸ್ಥರ ಪುಸ್ತಕದ ವಿಚಾರವನ್ನು ಪ್ರಸ್ತಾಪಿಸಿ, ಲಡಾಖ್ನಲ್ಲಿನ ನೈಜ ಸ್ಥಿತಿಯನ್ನು ಸರ್ಕಾರ ಮುಚ್ಚಿಡುತ್ತಿದೆ ಎಂದು ಆರೋಪಿಸಿದರು.
