ವಿಶ್ವದಾದ್ಯಂತ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ನ (ICC Men’s T20 World Cup 2026) ಹೈ-ವೋಲ್ಟೇಜ್ ಕಾದಾಟಕ್ಕೆ ಈಗ ತಣ್ಣೀರು ಬಿದ್ದಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ (Shehbaz Sharif) ಅಧಿಕೃತವಾಗಿ ಘೋಷಿಸಿದ್ದು, ಫೆಬ್ರವರಿ 15ರಂದು ನಡೆಯಬೇಕಿದ್ದ ಪಂದ್ಯ ರದ್ದಾಗುವುದು ಖಚಿತವಾಗಿದೆ.
ಫೆಬ್ರವರಿ 4, 2026 ರಂದು ನಡೆದ ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಸಭೆಯ ಬಳಿಕ ಮಾತನಾಡಿದ ಪ್ರಧಾನಿ ಶೆಹಬಾಝ್ ಷರೀಫ್, “ಭಾರತದೊಂದಿಗೆ ನಾವು ಕ್ರಿಕೆಟ್ ಮೈದಾನದಲ್ಲಿ ಸೆಣಸಾಟ ನಡೆಸುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಇದು ಕೇವಲ ಕ್ರಿಕೆಟ್ ಮಂಡಳಿಯ ನಿರ್ಧಾರವಾಗಿರದೆ, ಪಾಕ್ ಸರ್ಕಾರದ ನಿಲುವಾಗಿದೆ ಎಂದು ಹೇಳಿದ್ದಾರೆ.
ಬಹಿಷ್ಕಾರಕ್ಕೆ ಪ್ರಮುಖ ಕಾರಣಗಳೇನು?
ಪ್ರಧಾನಿ ಶೆಹಬಾಝ್ ಷರೀಫ್ ಅವರು ಈ ನಿರ್ಧಾರದ ಹಿಂದಿನ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಪ್ರಮುಖವಾಗಿ ಈ ಹಿಂದೆ ಪಾಕಿಸ್ತಾನದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಪ್ರಮುಖ ಟೂರ್ನಿಗಳಿಗೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ (BCCI) ಮತ್ತು ಭಾರತ ಸರ್ಕಾರ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. “ಭಾರತವು ಭದ್ರತೆಯ ನೆಪವೊಡ್ಡಿ ನಮ್ಮ ದೇಶಕ್ಕೆ ಬರುವುದಿಲ್ಲ ಎಂದಾದರೆ, ನಾವು ಅವರ ವಿರುದ್ಧ ತಟಸ್ಥ ಸ್ಥಳದಲ್ಲೂ ಆಡುವುದರಲ್ಲಿ ಅರ್ಥವಿಲ್ಲ. ಗೌರವ ಮತ್ತು ಸಮಾನತೆ ಏಕಮುಖವಾಗಿರಲು ಸಾಧ್ಯವಿಲ್ಲ,” ಎಂದು ಷರೀಫ್ ಕಿಡಿಕಾರಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ | ‘ಆರೆಸ್ಸೆಸ್’ ಪ್ರಸ್ತಾಪಿಸಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶಿವಲಿಂಗೇಗೌಡ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಐಸಿಸಿಗೆ (ICC) ಚಿನ್ನದ ಮೊಟ್ಟೆ ಇಡುವ ಕೋಳಿಯಿದ್ದಂತೆ. ಈ ಪಂದ್ಯದಿಂದಲೇ ಟೂರ್ನಿಯ ಅತಿ ಹೆಚ್ಚಿನ ಆದಾಯ ಹರಿದು ಬರುತ್ತದೆ. ಇದೀಗ ಪಾಕಿಸ್ತಾನದ ಈ ನಿರ್ಧಾರದಿಂದ ಪ್ರಸಾರ ಹಕ್ಕುಗಳು ಮತ್ತು ಜಾಹೀರಾತು ಆದಾಯದಲ್ಲಿ ಭಾರಿ ಕುಸಿತವಾಗುವ ಸಾಧ್ಯತೆಯಿದೆ.
