ಬೆಂಗಳೂರು/ಮೈಸೂರು: ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ‘ನಾಯಕತ್ವ ಬದಲಾವಣೆ’ ವಿಚಾರ ಈಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ “ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ್ದನ್ನು ನಾವು ಶಿರಸಾವಹಿಸಿ ಪಾಲಿಸುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಗಿ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ, “ಐದು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಇದಕ್ಕೆ ಹೈಕಮಾಂಡ್ ಹಸಿರು ನಿಶಾನೆ ನೀಡಿದೆ” ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದರು.
ಯತೀಂದ್ರ ಅವರ ಈ ಹೇಳಿಕೆಗೆ ದಾವಣಗೆರೆಯಲ್ಲಿ ಶಾಸಕ ಬಸವರಾಜ್ ಶಿವಗಂಗಾ ನೀಡಿದ್ದ ಹೇಳಿಕೆಯೇ ಪ್ರಚೋದನೆ ನೀಡಿದಂತಿದೆ. “ಅಧಿಕಾರ ಹಂಚಿಕೆ ಒಪ್ಪಂದ ಇದೆಯೋ ಇಲ್ಲವೋ ಎಂಬುದನ್ನು ಹೈಕಮಾಂಡ್ ಸ್ಪಷ್ಟಪಡಿಸಬೇಕು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಸಂಕಲ್ಪ” ಎಂದು ಶಿವಕುಮಾರ್ ಆಪ್ತ ಬಸವರಾಜ್ ಹೇಳಿದ್ದರು. ಇದು ಸಿದ್ದರಾಮಯ್ಯ ಬಣವನ್ನು ಕೆರಳಿಸಿದ್ದು, ಯತೀಂದ್ರ ನೇರವಾಗಿಯೇ ತಿರುಗೇಟು ನೀಡಿದ್ದಾರೆ.
ಡಿಕೆಶಿ ವ್ಯಂಗ್ಯ ಮತ್ತು ಇಕ್ಬಾಲ್ ಹುಸೇನ್ ಟಾಂಗ್
ಯತೀಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, “ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ್ದನ್ನು ನಾವು ಶಿರಸಾವಹಿಸಿ ಪಾಲಿಸುತ್ತೇವೆ” ಎಂದು ವ್ಯಂಗ್ಯವಾಗಿ ಟಾಂಗ್ ಕೊಟ್ಟಿದ್ದಾರೆ. ಇನ್ನೊಂದೆಡೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್, “ಹಿಂದೆ ಎರಡು ಬಾರಿ ಮುಹೂರ್ತ ಮಿಸ್ ಆಗಿರಬಹುದು, ಆದರೆ ಈ ಬಾರಿ ಬದಲಾವಣೆ ಖಚಿತ” ಎನ್ನುವ ಮೂಲಕ ಪರೋಕ್ಷವಾಗಿ ಡಿಕೆಶಿ ಪಟ್ಟಾಭಿಷೇಕದ ಸುಳಿವು ನೀಡಿದ್ದಾರೆ.
ಇದನ್ನೂ ಓದಿ | ‘ಆರೆಸ್ಸೆಸ್’ ಪ್ರಸ್ತಾಪಿಸಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಶಿವಲಿಂಗೇಗೌಡ
ಈ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರುತ್ತಿವೆ. ಬಜೆಟ್ ಅಧಿವೇಶನದ ಹೊತ್ತಲ್ಲೇ ಆರಂಭವಾಗಿರುವ ಈ ‘ಕುರ್ಚಿ ಸಮರ’ ಹೈಕಮಾಂಡ್ ಅಂಗಳ ತಲುಪಿದ್ದು, ದೆಹಲಿ ನಾಯಕರು ಈ ಗೊಂದಲಕ್ಕೆ ಹೇಗೆ ತೆರೆ ಎಳೆಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
