ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಯ ಬೃಹತ್ ಮುಂಬೈ ಮಹಾನಗರ ಪಾಲಿಕೆಯಲ್ಲಿ (BMC) ಕಳೆದ 25 ವರ್ಷಗಳಿಂದ ಮುಂದುವರಿದಿದ್ದ ಶಿವಸೇನೆಯ ಏಕಸ್ವಾಮ್ಯಕ್ಕೆ ಈಗ ತೆರೆ ಬಿದ್ದಿದೆ. ಬಿಜೆಪಿಯ ಹಿರಿಯ ಮುಖಂಡೆ ರಿತು ತಾವ್ಡೆ ಅವರು ಮುಂಬೈನ ನೂತನ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಕೇಸರಿ ಪಡೆ ಮುಂಬೈ ಸಾರಥ್ಯವನ್ನು ವಹಿಸಿಕೊಂಡಿದೆ.
ಘಾಟ್ಕೋಪರ್ ಪಶ್ಚಿಮದಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ರಿತು ತಾವ್ಡೆ ಅವರು ಈ ಹಿಂದೆ ಬಿಎಂಸಿಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕಳೆದ ಎರಡೂವರೆ ದಶಕಗಳಿಂದ ಶಿವಸೇನೆಯೇ ಮೇಯರ್ ಸ್ಥಾನವನ್ನು ತನ್ನ ಬಳಿ ಉಳಿಸಿಕೊಂಡಿತ್ತು. ಈಗ ಬಿಜೆಪಿ ಮತ್ತು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಮೈತ್ರಿಯು ಮುಂಬೈ ಆಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಶಿವಸೇನೆಗೆ ಉಪಮೇಯರ್ ಸ್ಥಾನ
ಮೈತ್ರಿ ಒಪ್ಪಂದದಂತೆ ಶಿವಸೇನೆಯ ಸಂಜಯ್ ಶಂಕರ್ ಘಾಡಿ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಜನವರಿ 15ರಂದು ನಡೆದ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 5ರಿಂದ ಆಯ್ಕೆಯಾಗಿದ್ದ ಇವರು, 2022ರಲ್ಲಿ ಉದ್ಧವ್ ಠಾಕ್ರೆ ಬಣದಿಂದ ಹೊರಬಂದು ಏಕನಾಥ್ ಶಿಂದೆ ಅವರ ಬಣಕ್ಕೆ ಸೇರಿದವರಾಗಿದ್ದಾರೆ. ಸಂಜಯ್ ಘಾಡಿ ಅವರು ಕೇವಲ 15 ತಿಂಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ. ಏಕೆಂದರೆ ಶಿವಸೇನೆಯು ತನ್ನ ನಾಲ್ವರು ಕಾರ್ಪೊರೇಟರ್ಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಅವಧಿಯನ್ನು ವಿಭಜಿಸಲು ನಿರ್ಧರಿಸಿದೆ.
ಇದನ್ನೂ ಓದಿ | ಪಾಕಿಸ್ತಾನಕ್ಕೆ ಅಮೆರಿಕ ಶಾಕ್: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ; ನಕ್ಷೆ ಮೂಲಕ ‘ದೊಡ್ಡಣ್ಣ’ನ ಸಂದೇಶ!
ರಾಜಕೀಯ ಮಹತ್ವ
ಮುಂಬೈ ಮೇಯರ್ ಸ್ಥಾನವನ್ನು ಬಿಜೆಪಿ ಪಡೆದಿರುವುದು ಮುಂಬರುವ ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯಾಗಿದೆ. ಮಹಾ ವಿಕಾಸ್ ಅಘಾಡಿ ಸರ್ಕಾರದ ಪತನದ ನಂತರ, ಮುಂಬೈ ಮೇಲೆ ಪೂರ್ಣ ನಿಯಂತ್ರಣ ಸಾಧಿಸಲು ಹವಣಿಸುತ್ತಿದ್ದ ಬಿಜೆಪಿಗೆ ಈ ಗೆಲುವು ಆನೆಬಲ ತಂದಿದೆ. ಇತ್ತ ಶಿವಸೇನೆ (ಶಿಂದೆ ಬಣ) ಕೂಡ ಅಧಿಕಾರದಲ್ಲಿ ಸಮಪಾಲು ಪಡೆಯುವ ಮೂಲಕ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದೆ.
