ಬೆಂಗಳೂರು/ಕೊಲಂಬೊ: ಕ್ರಿಕೆಟ್ ಲೋಕದ ಅತ್ಯಂತ ರೋಚಕ ಹಬ್ಬ ‘ಐಸಿಸಿ ಪುರುಷರ ಟಿ20 ವಿಶ್ವಕಪ್ 2026’ ಇಂದು ಇಂದಿನಿಂದ (ಫೆಬ್ರವರಿ 7) ಪ್ರಾರಂಭವಾಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಹಾಲಿ ಚಾಂಪಿಯನ್ ಆಗಿರುವ ಭಾರತವು ಶ್ರೀಲಂಕಾದೊಂದಿಗೆ ಸಹಭಾಗಿತ್ವ ವಹಿಸಿ ಈ ಟೂರ್ನಿಯ ಆತಿಥ್ಯವನ್ನು ವಹಿಸಿಕೊಂಡಿದೆ. ಭಾರತದ ಪ್ರಮುಖ ನಗರಗಳು ಮತ್ತು ಶ್ರೀಲಂಕಾದ ಕ್ರೀಡಾಂಗಣಗಳು ಈ ಮಹಾ ಸಮರಕ್ಕೆ ಸಾಕ್ಷಿಯಾಗಲಿವೆ.
ಭಾರತದ ಐತಿಹಾಸಿಕ ಪಯಣ
2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಎಂ.ಎಸ್. ಧೋನಿ ನೇತೃತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಅದಾದ ದೀರ್ಘ ಹದಿನೇಳು ವರ್ಷಗಳ ನಂತರ, 2024ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ನಡೆದ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ರೋಹಿತ್ ಶರ್ಮಾ ಪಡೆ ಎರಡನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈಗ 2026ರಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವ (Defending the Title) ಗುರಿಯನ್ನು ಹೊಂದಿದೆ.
ಸತತ ಎರಡನೇ ಬಾರಿಯ ಗೆಲುವು: ಅಸಾಧ್ಯವಾದದ್ದನ್ನು ಸಾಧಿಸುತ್ತಾ ಭಾರತ?
ಟಿ20 ವಿಶ್ವಕಪ್ ಇತಿಹಾಸವನ್ನು ಗಮನಿಸಿದರೆ ಇದುವರೆಗೆ ಯಾವುದೇ ತಂಡಕ್ಕೂ ಸತತ ಎರಡು ಬಾರಿ (Back-to-Back) ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಎರಡು ಬಾರಿ ಚಾಂಪಿಯನ್ ಆಗಿದ್ದರೂ, ಅವು ಸತತ ಆವೃತ್ತಿಗಳಲ್ಲಿ ಗೆದ್ದಿಲ್ಲ. ಒಂದು ವೇಳೆ ಸೂರ್ಯಕುಮಾರ್ ಯಾದವ್ ನೇತೃತ್ವದ ಈ ಯುವ ಭಾರತ ತಂಡ 2026ರಲ್ಲಿ ಟ್ರೋಫಿ ಗೆದ್ದರೆ, ಟಿ20 ವಿಶ್ವಕಪ್ ಇತಿಹಾಸದಲ್ಲೇ ಸತತ ಎರಡು ಬಾರಿ ಚಾಂಪಿಯನ್ ಆದ ಮೊದಲ ದೇಶ ಎಂಬ ಹೊಸ ದಾಖಲೆಯನ್ನು ಭಾರತ ನಿರ್ಮಿಸಲಿದೆ.
ಇದನ್ನೂ ಓದಿ | ಇಂಗ್ಲೆಂಡ್ ಮಣಿಸಿ ದಾಖಲೆಯ 6ನೇ ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಯುವ ಭಾರತ!
ಆತಿಥ್ಯದ ಬಲ ಮತ್ತು ಸವಾಲುಗಳು
ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿರುವುದರಿಂದ ಉಪಖಂಡದ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುವ ನಿರೀಕ್ಷೆಯಿದೆ. ತವರಿನ ಅಭಿಮಾನಿಗಳ ಬೆಂಬಲ ಭಾರತಕ್ಕೆ ದೊಡ್ಡ ಶಕ್ತಿಯಾಗಿದ್ದರೂ, ಹರ್ಷಿತ್ ರಾಣಾ ಅವರಂತಹ ವೇಗಿಗಳ ಗಾಯದ ಸಮಸ್ಯೆ ತಂಡಕ್ಕೆ ಸಣ್ಣ ಆಘಾತ ನೀಡಿದೆ. ಆದರೂ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಶದೀಪ್ ಸಿಂಗ್ ಅವರಂತಹ ಅನುಭವಿಗಳ ಬಲ ತಂಡಕ್ಕಿದೆ.
