ಕೊಲಂಬೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮತ್ತೊಮ್ಮೆ ಅಬ್ಬರಿಸಿದ ಭಾರತ ಕ್ರಿಕೆಟ್ ತಂಡ, ಭಾನುವಾರ ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ 61 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಸೂರ್ಯಕುಮಾರ್ ಯಾದವ್ ಪಡೆ ಸೂಪರ್-8 ಹಂತಕ್ಕೆ ಲಗ್ಗೆ ಇಟ್ಟಿದ್ದು, ಮಹಾಶಿವರಾತ್ರಿಯ ಹಬ್ಬದ ಸಂಭ್ರಮದಲ್ಲಿದ್ದ ಭಾರತೀಯ ಕ್ರೀಡಾಭಿಮಾನಿಗಳಿಗೆ ಅತ್ಯಮೂಲ್ಯ ಉಡುಗೊರೆ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ತಂಡದ ಆರಂಭ ಆಘಾತಕಾರಿಯಾಗಿತ್ತು. ಭಾರಿ ನಿರೀಕ್ಷೆ ಹೊತ್ತು ಕಣಕ್ಕಿಳಿದಿದ್ದ ಸ್ಪೋಟಕ ಆಟಗಾರ ಅಭಿಷೇಕ್ ಶರ್ಮಾ, ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಅವರ ಮೊದಲ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಶೂನ್ಯಕ್ಕೆ (ಡಕ್ ಔಟ್) ನಿರ್ಗಮಿಸಿದರು. ಇದು ಅಭಿಮಾನಿಗಳಲ್ಲಿ ಕೆಲಕಾಲ ಆತಂಕ ಮೂಡಿಸಿತು. ಆದರೆ, ನಂತರ ಕ್ರೀಸ್ಗೆ ಅಂಟಿಕೊಂಡ ಇಶಾನ್ ಕಿಶನ್ ಪಾಕ್ ಬೌಲರ್ಗಳ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದರು.
ಟ್ರಿಕಿ ಪಿಚ್ನಲ್ಲೂ ಎದುರಾಳಿ ಬೌಲರ್ಗಳನ್ನು ಮನಬಂದಂತೆ ದಂಡಿಸಿದ ಇಶಾನ್ ಕಿಶನ್, ಕೇವಲ 40 ಎಸೆತಗಳಲ್ಲಿ 77 ರನ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಅವರಿಗೆ ಸಾಥ್ ನೀಡಿದ ನಾಯಕ ಸೂರ್ಯಕುಮಾರ್ ಯಾದವ್ (32) ಮತ್ತು ಶಿವಂ ದುಬೆ (27) ಅವರ ಉಪಯುಕ್ತ ಕಾಣಿಕೆಯಿಂದ ಭಾರತ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಇದನ್ನೂ ಓದಿ | ಭಾರತ-ಪಾಕ್ ಮಹಾ ಸಮರ: ಕೊಲಂಬೊದಲ್ಲಿ ಹೋಟೆಲ್ ರೂಮ್ ಸಿಗೋದೇ ಕಷ್ಟ, ದರ ಕೇಳಿದ್ರೆ ಶಾಕ್!
ಗೆಲ್ಲಲು 176 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ, ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿತು. ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಅವರ ಮಾರಕ ದಾಳಿಗೆ ನಲುಗಿದ ಪಾಕ್ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಉಸ್ಮಾನ್ ಖಾನ್ (44) ಅವರನ್ನು ಹೊರತುಪಡಿಸಿ ಮತ್ಯಾವ ಬ್ಯಾಟರ್ಗಳು ಪ್ರತಿರೋಧ ತೋರಲಿಲ್ಲ. ಅಂತಿಮವಾಗಿ ಪಾಕಿಸ್ತಾನ 18 ಓವರ್ಗಳಲ್ಲಿ 114 ರನ್ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು. ಭಾರತದ ಪರ ಹಾರ್ದಿಕ್ ಪಾಂಡ್ಯ, ಬುಮ್ರಾ, ಅಕ್ಷರ್ ಮತ್ತು ವರುಣ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
