ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮತ್ತೆ ‘ಅಧಿಕಾರ ಹಂಚಿಕೆ’ (Power Sharing) ಮತ್ತು ‘ನಾಯಕತ್ವ ಬದಲಾವಣೆ’ಯ ಗುಸುಗುಸು ಜೋರಾಗಿದೆ. ಈ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ವಿಚಾರವಾಗಿ ಹೊಸದೊಂದು ‘ಗೂಗ್ಲಿ’ ಎಸೆದಿದ್ದಾರೆ. ತಾವೇನೂ ಮಾತನಾಡುವುದಿಲ್ಲ, ಸಮಯ ಬಂದಾಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಲ್ಲವನ್ನೂ ಹೇಳುತ್ತಾರೆ ಎನ್ನುವ ಮೂಲಕ ಚೆಂಡನ್ನು ಸಿಎಂ ಅಂಗಳಕ್ಕೆ ದಾಟಿಸಿದ್ದಾರೆ.
ಮಹದೇವಪ್ಪಗೆ ಪರೋಕ್ಷ ತಿರುಗೇಟು:
ಇತ್ತೀಚೆಗೆ ಸಚಿವ ಹೆಚ್.ಸಿ. ಮಹದೇವಪ್ಪ ಅವರು, “ನಾಯಿ ಬಾಲ ಅಲ್ಲಾಡಿಸಬೇಕು, ಬಾಲವೇ ನಾಯಿಯನ್ನು ಅಲ್ಲಾಡಿಸಬಾರದು” ಎಂದು ಮಾರ್ಮಿಕವಾಗಿ ಹೇಳಿಕೆ ನೀಡಿದ್ದರು. ಇದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ಮತ್ತು ಅವರ ಆಪ್ತರಿಗೆ ಟಾಂಗ್ ನೀಡಿದಂತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಈ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ನಯವಾಗಿಯೇ ತಿರುಗೇಟು ನೀಡಿದ್ದಾರೆ.
“ನಾನು ಮಹದೇವಪ್ಪನಿಗಾಗಲಿ ಅಥವಾ ಮತ್ಯಾರಿಗೋ ಉತ್ತರ ಕೊಡಲು ತಯಾರಿಲ್ಲ. ನಮ್ಮ ಪಕ್ಷದ ವಿಚಾರದಲ್ಲಿ ಹೈಕಮಾಂಡ್ ಇದೆ. ಅಧಿಕಾರ ಹಂಚಿಕೆ ಮತ್ತು ನಾಯಕತ್ವದ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ನಾನು ಮತ್ತು ಸಿದ್ದರಾಮಯ್ಯ ಅವರು ನಾಲ್ಕು ಜನ ಕುಳಿತು ಮಾತನಾಡಿದ್ದೇವೆ. ಅಲ್ಲಿ ಏನಾಗಿದೆ ಎಂಬುದು ನಮಗೆ ಮಾತ್ರ ಗೊತ್ತು. ಹೀಗಾಗಿ ರಸ್ತೆಯಲ್ಲಿ ಹೋಗುವವರ ಮಾತುಗಳಿಗೆ ನಾನು ಉತ್ತರಿಸಲ್ಲ,” ಎಂದು ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ | ಪ್ರಿಯಾಂಕ್ ಖರ್ಗೆಗೆ ‘ಆರ್ಎಸ್ಎಸ್ ಫೋಬಿಯಾ’: ಸಿ.ಟಿ. ರವಿ
ಸಿದ್ದರಾಮಯ್ಯನವರೇ ಹೇಳ್ತಾರೆ!
ಪವರ್ ಶೇರಿಂಗ್ ಒಪ್ಪಂದದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, “ಆ ಸಮಯ ಬಂದಾಗ ಸಿದ್ದರಾಮಯ್ಯ ಅವರೇ ಮಾತನಾಡುತ್ತಾರೆ. ಅವರೇ ಆ ಜಾಗದಲ್ಲಿದ್ದಾರೆ, ಅವರೇ ಉತ್ತರ ಕೊಡುತ್ತಾರೆ,” ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಡಿಕೆಶಿ ಅವರ ಈ ನಡೆ, ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಒಪ್ಪಂದವನ್ನು ಪಾಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಅವರ ಮೇಲಿದೆ ಎಂಬುದನ್ನು ಸೂಕ್ಷ್ಮವಾಗಿ ರವಾನಿಸಿದಂತಿದೆ.
