Water combat training: ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಂಗಳಾ ಜಲಾಶಯದಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಭಯೋತ್ಪಾದಕರಿಗೆ ಜಲ ಯುದ್ಧ ತರಬೇತಿ; ಭಾರತ ಆತಂಕ

ನವದೆಹಲಿ, ಜು.15: ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ (PoJK) ಮಂಗಳಾ ಜಲಾಶಯದಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಭಯೋತ್ಪಾದಕರಿಗೆ ಜಲ ಯುದ್ಧ ತರಬೇತಿ ನೀಡಲಾಗುತ್ತಿದೆ. ಉಗ್ರರು ಜಲ ಯುದ್ಧ ತರಬೇತಿ ಪಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮಂಗಳಾ ಜಲಾಶಯದಲ್ಲಿ ಲಷ್ಕರ್ನ ಹಿರಿಯ ಕಮಾಂಡರ್ ಹಾರಿಸ್ ದಾರ್ ತಮ್ಮ ಸಂಘಟನೆಯು ವಿಶೇಷ ಜಲ ತರಬೇತಿ ನಡೆಸುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ತರಬೇತಿ ಪಡೆಯುತ್ತಿರುವ ವಿಡಿಯೋ ಹೊರಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ನದಿ ನೀರು ಒಪ್ಪಂದದ ಕುರಿತು ಭಿನ್ನಾಭಿಪ್ರಾಯಗಳು ಮುಂದುವರಿದಿರುವ ಈ ಹೊತ್ತಿನಲ್ಲಿ, ಉಗ್ರರ ಜಲ ಆಧಾರಿತ ಕಾರ್ಯಾಚರಣೆಯ ತರಬೇತಿ ದೃಶ್ಯಗಳು ಮುಂಚೂಣಿಗೆ ಬಂದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಈ ವಿಡಿಯೋದ ಅಸಲಿಯತ್ತನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗಿದ್ದರೂ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ (ISI) ಬೆಂಬಲದೊಂದಿಗೆ ಮಂಗಳಾ ಜಲಾಶಯದಲ್ಲಿ ಲಷ್ಕರ್ ಉಗ್ರರು ಈಜು ಮತ್ತು ಜಲ ಸಂಚರಣೆಯ ತಾಲೀಮು ನಡೆಸುತ್ತಿರುವುದು ಇದರಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ತಮ್ಮ ತರಬೇತಿ ಕೇಂದ್ರದಲ್ಲಿ ಉಗ್ರರನ್ನು ಉದ್ದೇಶಿಸಿ ಲಷ್ಕರ್ ಕಮಾಂಡರ್ ಹಾರಿಸ್ ದಾರ್ ಮಾತನಾಡುವಾಗ ಮುಂದಿನ ಹಂತದ ಜಲ ತರಬೇತಿಯೂ ಇದೇ ಮಂಗಳಾ ಜಲಾಶಯದಲ್ಲಿ ನಡೆಯಲಿದೆ ಎಂದು ಹೇಳಿದ್ದರು. ಈ ವೇಳೆ ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ್ದ. ಪಾಕಿಸ್ತಾನದ ನೀರನ್ನು ಭಾರತ ತಡೆ ಹಿಡಿದಿದೆ ಎಂದು ಆರೋಪಿಸಿದ್ದರು. 2026 ರಲ್ಲಿ ನೀರಿನ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದೆ ಎಂದು ಮುನ್ಸೂಚನೆ ನೀಡಿದ್ದ. ಆತನ ಈ ಬೆದರಿಕೆ ಬೆನ್ನಲ್ಲೇ ತರಬೇತಿ ವಿಡಿಯೋ ಹೊರಬಂದಿರುವುದು ರಕ್ಷಣಾ ವಲಯದಲ್ಲಿ ಆತಂಕ ಮೂಡಿಸಿದೆ. ಈ ಮಂಗಳಾ ಜಲಾಶಯದ ಪ್ರದೇಶವು ಈ ಹಿಂದೆಯೂ ಲಷ್ಕರ್ ಚಟುವಟಿಕೆಗಳ ತಾಣವಾಗಿತ್ತು. 2008 ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಅಜ್ಮಲ್ ಕಸಬ್ ಸೇರಿದಂತೆ ಹಲವು ಭಯೋತ್ಪಾದಕರು ಇದೇ ಮಂಗಳಾ ಪ್ರದೇಶದಲ್ಲಿ ಸಮುದ್ರ ಮತ್ತು ಜಲ ಆಧಾರಿತ ತರಬೇತಿ ಪಡೆದಿದ್ದರು ಎಂದು ಹಿಂದಿನ ಗುಪ್ತಚರ ವರದಿ ತಿಳಿಸಿದೆ
ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನದ ಶೇಖ್ಪುರಾದ್ದು ಎಂದು ಹೇಳಲಾಗುತ್ತಿದೆ.
ಕಳೆದ 2025 ರ ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತ ಸರ್ಕಾರವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿತ್ತು. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವವರೆಗೂ ಈ ಒಪ್ಪಂದವು ಜಾರಿಗೆ ಬರುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಅಂದಿನಿಂದ ಇಸ್ಲಾಮಾಬಾದ್ ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಪ್ರಸ್ತಾಪಿಸುತ್ತಿದ್ದರೂ, ಭಾರತ ಮಾತ್ರ ತನ್ನ ನಿಲುವಿಗೆ ಬದ್ಧವಾಗಿದೆ. ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ವಿಷಯವನ್ನು ಪುನರುಚ್ಚರಿಸಿದ್ದು, ಸಿಂಧೂ ನದಿ ನೀರು ಒಪ್ಪಂದದ ಕುರಿತು ಭಾರತ ಸರ್ಕಾರದ ನಿಲುವು ಎಂದಿನಂತೆ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
