ಪೆಲೆಟ್ ಗಾಯ ಉಲ್ಲೇಖ; ವೈದ್ಯಕೀಯ ದಾಖಲೆಗಳನ್ನು ಆಧರಿಸಿ India Today Digital ಈ ಕುರಿತು ವರದಿ ಪ್ರಕಟಿಸಿದೆ.
ನವದೆಹಲಿ, ಜು. 24: ಜಂತರ್ ಮಂತರ್ ಬಳಿ ಜುಲೈ 20ರಂದು ನಡೆದ ಕಾಕ್ರೋಚ್ ಜನತಾ ಪಾರ್ಟಿಯ (CJP) ‘ಚಲೋ ಸಂಸತ್’ ಮೆರವಣಿಗೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಪೆಲೆಟ್ ಗನ್ ಬಳಸಿವೆ ಎಂಬ ಆರೋಪ ಕೇಳಿಬಂದಿದೆ. ಗಾಯಗೊಂಡ ಪ್ರತಿಭಟನಾಕಾರರ ಹೇಳಿಕೆ ಹಾಗೂ ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯಕೀಯ ದಾಖಲೆಗಳನ್ನು ಆಧರಿಸಿ India Today Digital ಈ ಕುರಿತು ವರದಿ ಪ್ರಕಟಿಸಿದೆ.
ವರದಿಯ ಪ್ರಕಾರ, ದಿಲ್ಲಿಯ 25 ವರ್ಷದ ಪ್ರತಿಭಟನಾಕಾರರೊಬ್ಬರು ಮೆರವಣಿಗೆಯ ವೇಳೆ ಬೆನ್ನು ಮತ್ತು ಬಲ ಮೊಣಕೈ ಭಾಗದಲ್ಲಿ ಪೆಲೆಟ್ ಗಾಯಗಳಿಗೆ ಒಳಗಾಗಿದ್ದಾರೆ. ಒಂದು ದಿನ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಪ್ರಸ್ತುತ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ದೇಹದಲ್ಲಿದ್ದ ಎಲ್ಲಾ ಪೆಲೆಟ್ಗಳನ್ನು ವೈದ್ಯರು ಹೊರತೆಗೆದಿದ್ದಾರೆ ಎಂದು ವರದಿ ತಿಳಿಸಿದೆ.
India Today Digital ಜೊತೆ ಮಾತನಾಡಿರುವ ಗಾಯಾಳು, “CJP ಪ್ರತಿಭಟನೆಗೆ ತೆರಳಿದಾಗ ನನ್ನ ಮೇಲೆ ಪೆಲೆಟ್ ಗನ್ನಿಂದ ಗುಂಡು ಹಾರಿಸಲಾಗುತ್ತದೆ ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಪೆಲೆಟ್ ಗನ್ಗಳನ್ನು ಕಾಶ್ಮೀರದಲ್ಲಿ ಮಾತ್ರ ಬಳಸಲಾಗುತ್ತದೆ ಎಂದುಕೊಂಡಿದ್ದೆ. ‘ಚಲೋ ಸಂಸತ್’ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಜಂತರ್ ಮಂತರ್ ಬಳಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯುತ್ತಿದ್ದಾಗ ಅಶ್ರುವಾಯು ಸಿಡಿಸುವ ವೇಳೆ ನನಗೆ ಪೆಲೆಟ್ ತಾಗಿತು” ಎಂದು ಹೇಳಿದ್ದಾರೆ.
ಘಟನೆಯ ಕುರಿತು ವಿವರಿಸಿರುವ ಗಾಯಾಳು, ಗಲಾಟೆಯನ್ನು ಯಾರು ಆರಂಭಿಸಿದರು ಎಂಬುದು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಒಂದರ ಮೇಲೊಂದರಂತೆ ಅಶ್ರುವಾಯು ಶೆಲ್ಗಳನ್ನು ಸಿಡಿಸುತ್ತಿದ್ದರು. ತಮ್ಮ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರ ಕಣ್ಣಿನ ಮೇಲ್ಭಾಗಕ್ಕೆ ಅಶ್ರುವಾಯು ಶೆಲ್ ತಾಗಿತ್ತು ಎಂದು ತಿಳಿಸಿದ್ದಾರೆ.
ಆರಂಭದಲ್ಲಿ ಅಶ್ರುವಾಯು ಶೆಲ್ಗಳನ್ನು ಗಾಳಿಯಲ್ಲಿ ಸಿಡಿಸಲಾಗುತ್ತಿತ್ತು. ಆದರೆ ಘರ್ಷಣೆ ತೀವ್ರಗೊಂಡ ಬಳಿಕ ಪೊಲೀಸರು ಮತ್ತು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಬ್ಬಂದಿ ಬಂದೂಕಿನ ನಳಿಕೆಗಳನ್ನು ಜನಸಂದಣಿಯತ್ತ ತಿರುಗಿಸಿ ಫೈರಿಂಗ್ ಆರಂಭಿಸಿದರು ಎಂದು ಅವರು ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿದ್ದ ಗೊಂದಲದ ನಡುವೆ ಪೊಲೀಸರೊಬ್ಬರು ತಮ್ಮತ್ತ ಗನ್ ಗುರಿ ಇಟ್ಟಿರುವುದನ್ನು ಗಮನಿಸಿ ಓಡಲು ಪ್ರಯತ್ನಿಸಿದಾಗ ಬೆನ್ನು ಮತ್ತು ಬಲ ಮೊಣಕೈ ಬಳಿ ಪೆಲೆಟ್ ತಾಗಿತು. ತಾವು ಓಡದೇ ಇದ್ದಿದ್ದರೆ ಪೆಲೆಟ್ ನೇರವಾಗಿ ಮುಖಕ್ಕೆ ತಾಗುವ ಸಾಧ್ಯತೆ ಇತ್ತು ಎಂದು ಗಾಯಾಳು ಹೇಳಿದ್ದಾರೆ.
ಘರ್ಷಣೆಯಲ್ಲಿ ಗಾಯಗೊಂಡ ಇತರ ಪ್ರತಿಭಟನಾಕಾರರ ಕುರಿತು The Indian Express ಮತ್ತು The Hindu ಕೂಡ ವರದಿ ಮಾಡಿವೆ. The Indian Express ವರದಿಯ ಪ್ರಕಾರ, ಪೆಲೆಟ್ ಗಾಯಕ್ಕೊಳಗಾದ 19 ವರ್ಷದ ಯುವಕನೊಬ್ಬ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ಮತ್ತೊಬ್ಬ ವ್ಯಕ್ತಿಯ ಕತ್ತಿನ ಪ್ರಮುಖ ರಕ್ತನಾಳದ ಸಮೀಪ ಪೆಲೆಟ್ ಸಿಲುಕಿಕೊಂಡಿದೆ ಎನ್ನಲಾಗಿದೆ.
25 ವರ್ಷದ ಶೇಖ್ ಇರ್ಶಾದ್ ಮನ್ಸೂರಿ ಎಂಬುವವರು ಮುಖ ಮತ್ತು ದೇಹದ ಮೇಲ್ಭಾಗದಲ್ಲಿ ಹಲವು ಪೆಲೆಟ್ ಗಾಯಗಳಿಗೆ ಒಳಗಾಗಿದ್ದು, ಲೇಡಿ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕನಾಟ್ ಪ್ಲೇಸ್ನ ಪಾಲಿಕಾ ಬಜಾರ್ ಬಳಿ RAF ಸಿಬ್ಬಂದಿಯೊಬ್ಬರು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರ ಸ್ನೇಹಿತ ಆರೋಪಿಸಿದ್ದಾರೆ.
ಗುರುಗ್ರಾಮದಲ್ಲಿ ಉದ್ಯೋಗದಲ್ಲಿರುವ 25 ವರ್ಷದ MBA ಪದವೀಧರ ಇರ್ಶಾದ್ ಶೇಖ್ ಅವರ ಮುಖ, ಮೂಗು, ಗಲ್ಲ, ಕತ್ತು, ಹೆಗಲು ಮತ್ತು ಎದೆ ಭಾಗಗಳಲ್ಲೂ ಹಲವು ಪೆಲೆಟ್ ಗಾಯಗಳಾಗಿವೆ ಎಂದು ವರದಿಯಾಗಿದೆ.
The Hindu ವರದಿಯ ಪ್ರಕಾರ, 19 ವರ್ಷದ CJP ಪ್ರತಿಭಟನಾಕಾರರೊಬ್ಬರು ಬಲಗಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯಿದ್ದು, ದೃಷ್ಟಿ ಚೇತರಿಸಿಕೊಳ್ಳಲು ಶೇ.1ರಷ್ಟು ಮಾತ್ರ ಅವಕಾಶವಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರ ಕುಟುಂಬದವರು ಹೇಳಿದ್ದಾರೆ.
ಆದರೆ ‘ಚಲೋ ಸಂಸತ್’ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪವನ್ನು ದಿಲ್ಲಿ ಪೊಲೀಸರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ದಿಲ್ಲಿ ಪೊಲೀಸ್ ಪಡೆಗಳು ಪೆಲೆಟ್ ಗನ್ ಬಳಸಿವೆ ಎಂಬ ಆರೋಪ ಸುಳ್ಳು ಮತ್ತು ದಾರಿ ತಪ್ಪಿಸುವಂತಿದೆ. ದಿಲ್ಲಿ ಪೊಲೀಸರ ಬಳಿ ಪೆಲೆಟ್ ಗನ್ಗಳೇ ಇಲ್ಲ ಹಾಗೂ ಪ್ರತಿಭಟನೆಯಲ್ಲಿ ಅವುಗಳನ್ನು ಬಳಸಿಲ್ಲ ಎಂದು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಪರಿಶೀಲಿಸದ ಅಥವಾ ದಾರಿ ತಪ್ಪಿಸುವ ಮಾಹಿತಿಯನ್ನು ಸಾರ್ವಜನಿಕರು ಹಂಚಿಕೊಳ್ಳಬಾರದು ಎಂದೂ ದಿಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಪಡೆಗಳು ಪೆಲೆಟ್ ಗನ್ ಬಳಸಿವೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅದು ನಕಲಿ ಎಂದು PIB Fact Check ಕೂಡ ತಿಳಿಸಿದೆ.
ದಿಲ್ಲಿ ಪೊಲೀಸ್ ಮತ್ತು PIB ಆರೋಪಗಳನ್ನು ನಿರಾಕರಿಸಿದ್ದರೂ, ಆಸ್ಪತ್ರೆಯ ವೈದ್ಯಕೀಯ ದಾಖಲೆಗಳಲ್ಲಿ ಪೆಲೆಟ್ ಗಾಯಗಳ ಉಲ್ಲೇಖವಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳ ಹೇಳಿಕೆ ಮತ್ತು ಪೊಲೀಸರ ನಿರಾಕರಣೆಯ ನಡುವೆ ವ್ಯತ್ಯಾಸ ಕಂಡುಬಂದಿರುವುದರಿಂದ, ಘಟನೆ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

