ಎಸ್ಐಆರ್ ಕಾಲಾವಧಿ ವಿಸ್ತರಿಸುವ ಅಧಿಕಾರ ಚುನಾವಣಾ ಆಯೋಗಕ್ಕೇ ಇದೆ; ಮೊದಲು ಆಯೋಗವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜು. 28: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ಅವಧಿ ವಿಸ್ತರಣೆ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ನಿರ್ಧಾರ ಸಂಪೂರ್ಣವಾಗಿ ಚುನಾವಣಾ ಆಯೋಗದ (ECI) ವ್ಯಾಪ್ತಿಗೆ ಒಳಪಟ್ಟ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದೆ.
ದೇವನೂರು ಮಹದೇವ್ ಹಾಗೂ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಎಸ್ಐಆರ್ ಪ್ರಕ್ರಿಯೆಯ ಅವಧಿ ವಿಸ್ತರಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯಪೀಠ, ಕಾಲಾವಧಿ ವಿಸ್ತರಿಸುವ ಅಧಿಕಾರ ನ್ಯಾಯಾಲಯಕ್ಕಿಂತ ಚುನಾವಣಾ ಆಯೋಗಕ್ಕೇ ಇದೆ ಎಂದು ತಿಳಿಸಿದೆ.
ವಿಚಾರಣೆ ವೇಳೆ ನ್ಯಾಯಪೀಠ, ಚುನಾವಣಾ ಆಯೋಗದಲ್ಲಿ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದ್ದು, ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಪರಿಹಾರ ಕ್ರಮಗಳನ್ನು ಆಯೋಗವೇ ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟಿತು. ಅಗತ್ಯವಿದ್ದರೆ ಅವಧಿ ವಿಸ್ತರಣೆ ಸೇರಿದಂತೆ ಸೂಕ್ತ ಕ್ರಮಗಳನ್ನು ಆಯೋಗವೇ ಕೈಗೊಳ್ಳಲಿದೆ ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, ಅರ್ಜಿದಾರರು ಮೊದಲು ತಮ್ಮ ಮನವಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆಯೋಗ ಮನವಿಯನ್ನು ತಿರಸ್ಕರಿಸಿದಲ್ಲಿ ಬಳಿಕ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಈ ಆದೇಶದೊಂದಿಗೆ ಎಸ್ಐಆರ್ ಅವಧಿ ವಿಸ್ತರಣೆ ಕುರಿತ ಅಂತಿಮ ನಿರ್ಧಾರ ಈಗ ಚುನಾವಣಾ ಆಯೋಗದ ಕೈಯಲ್ಲಿದ್ದು, ಆಯೋಗದ ಮುಂದಿನ ಕ್ರಮದತ್ತ ಸಾರ್ವಜನಿಕರ ಗಮನ ನೆಟ್ಟಿದೆ.

