ಚಿತ್ರದುರ್ಗ, ಜು.29: ಬರ ಬಂದರೂ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಡಿಕೆಶಿವಕುಮಾರ್ ಕಾಟಾಚಾರಕ್ಕೆ ಪರಿಶೀಲನೆ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.
ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿಯಲ್ಲಿ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬರ ಆವರಿಸಿದ್ದರೂ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ. ಅಧಿಕಾರ ಲಾಲಸೆಯಿಂದ ಸರ್ಕಾರ ಹಾಗು ಸಿಎಂ ದೆಹಲಿ ಸುತ್ತುತ್ತಿದ್ದಾರೆ. ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂಬುದು ಅನುಮಾನವಾಗಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಸೇರಿದಂತೆ ರಾಜ್ಯದಲ್ಲಿ ಬರ ಆವರಿಸಿದ್ದು, ಜಿಲ್ಲೆಯಲ್ಲಿ ಶೆ. 19 ರಷ್ಟು ಮಾತ್ರ ಬಿತ್ತನೆಯಾಗಿದೆ. ಸೂರ್ಯಕಾಂತಿ ಶೇಂಗಾ ಬಿತ್ತಿರುವ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ. ಅಧಿಕಾರಿಗಳು ರೈತರಿಗೆ ಅನ್ಯಾಯ ಆಗದಂತೆ ವರದಿ ನೀಡಬೇಕು ಎಂದು ಅಶೋಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಮ್ಮ ಸರ್ಕಾರ ವಿದ್ದಾಗ ಬರ ಘೋಷಣೆಯಾಗಿ ಒಂದು ತಿಂಗಳಲ್ಲಿ ಪರಿಹಾರ ನೀಡಿದ್ದೆವು. ಕೇಂದ್ರದ ಬಗ್ಗೆ ಮಾತಾಡದೆ ಮೊದಲು ಬರ ಪರಿಹಾರ ನೀಡಿ ಎಂದು ತಾಕೀತು ಮಾಡಿದರು. ಕಾಂಗ್ರೆಸ್ ಸರ್ಕಾರ ರೈತರನ್ನು ಬಿಟ್ಟು ಮಂತ್ರಿ ಮಂಡಲ ರಚನೆಗಾಗಿ ಓಡಾಡುತ್ತಿದೆ. ಇವರಿಗೆ ಮಂತ್ರಿ ಮಂಡಲ ಮುಖ್ಯವಾಗಿದೆ. ರೈತರ ಜೊತೆ ಮಾತಾಡಲು ನಿಮಗೆ ಯೋಗ್ಯತೆ ಇಲ್ಲವೆ. ರೈತರ ಪರವಾಗಿ ಬಿಜೆಪಿ ಅಧಿವೇಶನದಲ್ಲಿ ಹೊರಗೂ ಒಳಗು ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
