ಬೆಂಗಳೂರು, ಜು.3: ಕಾವೇರಿ ನೀರಿನ ಹಿತಾಸಕ್ತಿ ರಕ್ಷಣೆಗೆ ರಾಜ್ಯ ಸರ್ಕಾರ ತಕ್ಷಣ ಸಮಗ್ರ ಕ್ರಮ ಕೈಗೊಳ್ಳಬೇಕು, ಕರ್ನಾಟಕದ ಪ್ರಸ್ತುತ ಜಲಾಶಯಗಳಲ್ಲಿ ನೀರಿನ ಒಳಹರಿವು ಹಾಗೂ ಸಂಗ್ರಹಣೆಯ ಕೊರತೆಯನ್ನು
ಪರಿಗಣಿಸಿ, ರಾಜ್ಯದ ಕುಡಿಯುವ ನೀರು, ರೈತರ ಹಿತಾಸಕ್ತಿ ಹಾಗೂ ಕೃಷಿ ರಕ್ಷಣೆಗೆ ರಾಜ್ಯ ಸರ್ಕಾರ ತಕ್ಷಣವೇ ಸಮಗ್ರ ಹಾಗೂ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಟಿ . ಎ.ಶರವಣ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಪ್ರಮುಖವಾಗಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ನೀರು ಬಿಡುಗಡೆ ಆದೇಶವನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿ, ಮಳೆಯ ಅಭಾವ ಹಾಗೂ ವಾಸ್ತವಿಕ ನೀರಿನ ಲಭ್ಯತೆಯನ್ನು ಆಧರಿಸಿದ ವೈಜ್ಞಾನಿಕ “ಸಂಕಷ್ಟ ಹಂಚಿಕೆ ಸೂತ್ರ”ವನ್ನು ಜಾರಿಗೆ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಎ.ಶರವಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಜಲ ನೀತಿ ಹಾಗೂ ಸುಪ್ರೀಂಕೋರ್ಟ್ ತೀರ್ಪುಗಳ ಅನ್ವಯ ಸಂಕಷ್ಟದ ಸಂದರ್ಭಗಳಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು. ಮಳೆ ಪ್ರಮಾಣ, ಜಲಾಶಯಗಳ ನೀರಿನ ಮಟ್ಟ ಹಾಗೂ ತಜ್ಞರ ವರದಿಗಳ ಆಧಾರದ ಮೇಲೆ ಮಾತ್ರ ವೈಜ್ಞಾನಿಕ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.
ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮತಿ ದೊರಕುವಂತೆ ರಾಜ್ಯದ ಎಲ್ಲಾ ಪಕ್ಷಗಳು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು. ಇದೇ ವೇಳೆ, ರಾಜ್ಯದ ಸಂಸದರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನೊಳಗೊಂಡ ನಿಯೋಗವು ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು.
ಕಾವೇರಿ ವಿವಾದದಲ್ಲಿ ರಾಜ್ಯದ ಪರವಾಗಿ ಪರಿಣಾಮಕಾರಿ ವಾದ ಮಂಡಿಸಲು ಹಿರಿಯ ವಕೀಲರು, ನಿವೃತ್ತ ನೀರಾವರಿ ಎಂಜಿನಿಯರ್ಗಳು ಹಾಗೂ ಜಲತಜ್ಞರನ್ನು ಒಳಗೊಂಡ ಬಲಿಷ್ಠ ಕಾನೂನು ಮತ್ತು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಬೇಕು. ರಾಜ್ಯದ ಹಿತಾಸಕ್ತಿ ಸಂಬಂಧಿತ ಎಲ್ಲಾ ಅಂತರ್ರಾಜ್ಯ ಜಲ ವಿವಾದಗಳಿಗೆ ಮಾರ್ಗದರ್ಶನ ನೀಡಲು ಶಾಶ್ವತ ಸಲಹಾ ಸಮಿತಿಯನ್ನೂ ಸ್ಥಾಪಿಸಬೇಕು.
ನೀರಿನ ಕೊರತೆಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ತಕ್ಷಣವೇ ವಿಶೇಷ ಬೆಳೆ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಜೊತೆಗೆ, ಕರ್ನಾಟಕ ಎದುರಿಸುತ್ತಿರುವ ನೀರಿನ ಅಭಾವದ ನೈಜ ಪರಿಸ್ಥಿತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲು ರಾಜ್ಯ ಸರ್ಕಾರವು ಅಧಿಕೃತ ಶ್ವೇತಪತ್ರವನ್ನು ಹೊರಡಿಸಬೇಕು. ರಾಜ್ಯದ ಹಿತಾಸಕ್ತಿ, ರೈತರ ಕಲ್ಯಾಣ ಹಾಗೂ ಕುಡಿಯುವ ನೀರಿನ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಮೇಲ್ಕಂಡ ಎಲ್ಲ ಕ್ರಮಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಶರವಣ ಒತ್ತಾಯಿಸಿದ್ದಾರೆ.
