Tanveer sait ಸಚಿವ ಸಂಪುಟ ರಚನೆಯಲ್ಲಿ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ. ಇದು ‘ಆಶಾದಾಯಕವಲ್ಲ, ನಿರಾಶಾದಾಯಕ ಪಟ್ಟಿ’ ಎಂದು ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಆ.03: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಧಿಕೃತ ಘೋಷಣೆ ನಂತರ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಹಲವು ಶಾಸಕರು ಅಸಮಾಧಾನಗೊಂಡಿದ್ದಾರೆ. ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪಟ್ಟಿ‘ಆಶಾದಾಯಕವಲ್ಲ, ನಿರಾಶಾದಾಯಕ ಪಟ್ಟಿ’ ಎಂದು ಬಣ್ಣಿಸಿದ್ದಾರೆ.

ಸಚಿವ ಸಂಪುಟ ರಚನೆಯಲ್ಲಿ ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ ಎಂಬ ಭಾವನೆ ವ್ಯಕ್ತಪಡಿಸಿರುವ ಸೇಠ್, ತಮ್ಮ ಬೆಂಬಲಿಗರ ಆಕ್ರೋಶ ಮತ್ತು ಪ್ರತಿಭಟನೆಯ ನಡುವೆಯೂ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ. ಆಸೆ ನಿರಾಸೆಯಾಗಿದೆ. ಕೇವಲ ರಾಹುಲ್ಗಾಂಧಿಗೆ ಅಂದಿದ್ದಕ್ಕೆ ಕೆ.ಎನ್.ರಾಜಣ್ಣಗೆ ತಕ್ಷಣ ಗೇಟ್ ಪಾಸ್ ಕೊಡಿಸಿದ್ರು ಎಂದು ಕೆಎನ್ ರಾಜಣ್ಣ ಅವರ ಉದಾಹರಣೆ ಮತ್ತು ಪಕ್ಷದೊಳಗಿನ ಇತರ ಚಟುವಟಿಕೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಪಕ್ಷದಲ್ಲಿ ದಟ್ಟವಾದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದೇವೆ, ವರಿಷ್ಠರ ತೀರ್ಮಾನವನ್ನು ಒಪ್ಪಿಕೊಳ್ಳಬೇಕಾಗುತ್ತೆ. ಮೈಸೂರು ಭಾಗಕ್ಕೆ ಸಿಗಬೇಕಾದ ಶಕ್ತಿ, ಗೌರವ ಸಿಕ್ಕಿಲ್ಲ. ಮೈಸೂರು ಪ್ರಾಂತ್ಯಕ್ಕೆ ಅನ್ಯಾಯವಾಗಿದೆ. ಸಚಿವ ಸ್ಥಾನ ವಂಚಿತರಾದ ಬಗ್ಗೆ ಈಗಲೇ ವಿಶ್ಲೇಷಣೆ ಮಾಡುವುದಿಲ್ಲ, ಸೂಕ್ತ ಸಮಯ ಬಂದಾಗ ಮಾತನಾಡುತ್ತೇನೆ ಎಂದಿದ್ದಾರೆ. ಸಂಪುಟದಲ್ಲಿ ಸ್ಥಾನ ಪಡೆದ ಎಲ್ಲ ಶಾಸಕರಿಗೂ ತನ್ವೀರ್ ಸೇಠ್ ಅಭಿನಂದನೆ ಸಲ್ಲಿಸಿದ್ದಾರೆ.
