CHAMUNDI VARDHANTI MAHOTSAVA: ನಾಡದೇವಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಮೈಸೂರು, ಆ.04: ನಾಡದೇವಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಚಾಮುಂಡೇಶ್ವರಿ ದೇವಸ್ಥಾನವು ಹಬ್ಬದ ವಾತಾವರಣದಿಂದ ಕಂಗೊಳಿಸುತ್ತಿತ್ತು. ಈ ಮಹತ್ವದ ದಿನದಂದು ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 5 ಗಂಟೆಯಿಂದಲೇ ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳನ್ನು ನೆರವೇರಿಸಲಾಯಿತು. ವರ್ಧಂತಿ ಮಹೋತ್ಸವದ ಪ್ರಯುಕ್ತ ದೇವಾಲಯವನ್ನು ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಮುಖ್ಯದ್ವಾರದಲ್ಲಿ ತೆಂಗಿನ ಗರಿಗಳು, ಕಬ್ಬು ಮತ್ತು ವಿವಿಧ ಬಗೆಯ ಸುಂದರ ಹೂವುಗಳನ್ನು ಬಳಸಿ ಭವ್ಯವಾದ ಮಂಟಪವನ್ನು ನಿರ್ಮಿಸಲಾಗಿತ್ತು.
ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪ್ರಮೋದಾದೇವಿ ಒಡೆಯರ್ ಅವರು ಈ ವರ್ಧಂತಿ ಮಹೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು. ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
