Gautam Gambhir: ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ಗೆ ಸಂಕಷ್ಟ ಎದುರಾಗಿದೆ. ಇತ್ತೀಚಿನ ಸರಣಿ ಸೋಲುಗಳ ಬೆನ್ನಲ್ಲೇ, ಗಂಭೀರ್ ಅವರ ಕಠಿಣ ಕೋಚಿಂಗ್ ಶೈಲಿ ಮತ್ತು ಬಿಗುವಿನ ಆಡಳಿತದ ವಿರುದ್ಧ ತಂಡದ ಪ್ರಮುಖ ಹಿರಿಯ ಆಟಗಾರರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮೆಟ್ಟಿಲೇರಿದ್ದಾರೆ.
ಮುಂಬೈ, ಆ.4: ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಸರಣಿ ಸೋಲುಗಳಿಂದ ಕಂಗೆಟ್ಟಿರುವ ಬೆನ್ನಲ್ಲೇ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕಠಿಣ ಆಡಳಿತ ಮತ್ತು ಕೋಚಿಂಗ್ ಶೈಲಿಯ ವಿರುದ್ಧ ಹಿರಿಯ ಆಟಗಾರರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ಗೆ ದೂರು ನೀಡಿದ್ದಾರೆ.
ಗಂಭೀರ್ ಅವರ ನಡೆಗೆ ತೀವ್ರ ಬೇಸತ್ತಿರುವ ತಂಡದ ಸೀನಿಯರ್ ಆಟಗಾರರು, ಈ ಕುರಿತು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹಾಗೂ ಮಾಜಿ ಕ್ರಿಕೆಟಿಗರ ಬಳಿ ರಹಸ್ಯವಾಗಿ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ವರದಿಯಾಗಿದೆ. ಈ ಆಂತರಿಕ ಭಿನ್ನಾಭಿಪ್ರಾಯಗಳು ಈಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿವೆ.
ಮಾಜಿ ಕೋಚ್ ರಾಹುಲ್ ದ್ರಾವಿಡ್ ಕಾಲದಲ್ಲಿದ್ದ ಮುಕ್ತ ಮತ್ತು ಸ್ನೇಹಪರ ವಾತಾವರಣಕ್ಕೆ ಹೋಲಿಸಿದರೆ, ಗಂಭೀರ್ ಅವರ ಕಠಿಣ ಧೋರಣೆ ಮತ್ತು ಕಮ್ಯುನಿಕೇಶನ್ ಶೈಲಿ ಹಿರಿಯ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
ಸರಣಿ ಸೋಲುಗಳ ಸಂದರ್ಭದಲ್ಲಿ ಇಡೀ ಕೋಚಿಂಗ್ ವ್ಯವಸ್ಥೆಯ ತಪ್ಪುಗಳನ್ನು ಒಪ್ಪಿಕೊಳ್ಳುವ ಬದಲು, ಕೇವಲ ಪ್ರತ್ಯೇಕ ಆಟಗಾರರ ವೈಫಲ್ಯ ಅಥವಾ ಸೆಂಟರ್ ಆಫ್ ಎಕ್ಸಲೆನ್ಸ್ ಕಡೆಗೆ ಬೆರಳು ತೋರಿಸುವ ಪ್ರವೃತ್ತಿ ಆಟಗಾರರಲ್ಲಿ ಅತೃಪ್ತಿ ಮೂಡಿಸಿದೆ.
ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ವೈಟ್ವಾಶ್ ಸೋಲುಗಳು, ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗಾವಾಸ್ಕರ್ ಟ್ರೋಫಿ ಕೈತಪ್ಪಿದ್ದು, ಹಾಗೂ ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿ ಸೋಲುಗಳು ಗಂಭೀರ್ ಅವರ ಕಾರ್ಯತಂತ್ರದ ಪ್ರತಿಫಲ. ಇದಾಗ್ಯೂ ಈ ತಪ್ಪುಗಳನ್ನು ಆಟಗಾರರ ಮೇಲೆ ಹೊರಿಸಲಾಗುತ್ತಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಆಸ್ಟ್ರೇಲಿಯಾ ಪ್ರವಾಸದ ಸೋಲಿನ ನಂತರ, ಹಿರಿಯ ಆಟಗಾರರು ತಮ್ಮ ರೆಡ್-ಬಾಲ್ ಸ್ಥಾನವನ್ನು ಉಳಿಸಿಕೊಳ್ಳಲು ಕಡ್ಡಾಯವಾಗಿ ದೇಶೀಯ ಕ್ರಿಕೆಟ್ ಆಡಬೇಕೆಂದು ಗಂಭೀರ್ ಬಹಿರಂಗವಾಗಿ ಹೇಳಿಕೆ ನೀಡಿದ್ದು ಆಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
