SRINIVAS RESIGN?: ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ – KSRTC ಅಧ್ಯಕ್ಷ ಸ್ಥಾನಕ್ಕೆ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ತುಮಕೂರು, ಜು.4: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದು, KSRTC ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಗುಬ್ಬಿ ಕ್ಷೇತ್ರದಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಶ್ರೀನಿವಾಸ್ ಬೆಂಬಲಿಗರು, ಸಚಿವ ಸ್ಥಾನ ಸಿಗದಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ತುಮಕೂರಿನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ನೀಡಬೇಕು ಎಂದು ಜನರು ಹೇಳುತ್ತಿದ್ದರೂ, ಯಾರು ಹೇಳಬೇಕಿತ್ತೋ ಅವರು ಹೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. “ರಾಜಕೀಯದಲ್ಲಿ ನಮ್ಮಂಥ ಸಾಮಾನ್ಯ ರೈತನ ಮಗ ಮೇಲೆ ಬರುವುದು ಕಷ್ಟ. ಜಗಳ ಮಾಡಿ ಸ್ಥಾನ ಪಡೆದುಕೊಳ್ಳಲು ಅದೇನು ನಮ್ಮ ಅಪ್ಪನ ಆಸ್ತಿ ಅಲ್ಲ. ನಮಗೆ ಯೋಗ್ಯತೆ ಇಲ್ಲ ಎಂದು ಅರ್ಥ. ನಮಗೆ ಗಾಡ್ಫಾದರ್ ಇರಲಿಲ್ಲ, ಹೀಗಾಗಿ ಸಚಿವ ಸ್ಥಾನ ತಪ್ಪಿದೆ” ಎಂದು ತಮ್ಮ ಅಸಮಾಧಾನ ಹೊರಹಾಕಿದರು.
ರಾಜಕೀಯದ ಹೊಸ ಪಾಠ ಈಗ ಅರ್ಥವಾಗುತ್ತಿದೆ ಎಂದು ಹೇಳಿದ ಅವರು, ಪ್ರಾಮಾಣಿಕತೆಗೆ ರಾಜಕೀಯದಲ್ಲಿ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಪ್ರಶ್ನೆ ಮೂಡಿದೆ ಎಂದರು. “ರಾಜಕೀಯ ಡಬಲ್ ಗೇಮ್ ಮತ್ತು ಮೋಸದಿಂದ ಕೂಡಿದೆ. ಅವಕಾಶ ಸಿಗುತ್ತದೆ ಎಂದುಕೊಂಡಿದ್ದೆ, ಆದರೆ ಈಗ ಅವಕಾಶ ವಂಚಿತನಾಗಿದ್ದೇನೆ. ನಮ್ಮ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡಬಹುದಿತ್ತು” ಎಂದು ಬೇಸರ ವ್ಯಕ್ತಪಡಿಸಿದರು.
ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಮಾತನಾಡಿದ ಅವರು, “ಕೆಎಸ್ಆರ್ಟಿಸಿ ನಷ್ಟದಲ್ಲಿದೆ. ಅಲ್ಲಿ ಏನೂ ಸಾಧನೆ ಮಾಡಲು ಆಗುತ್ತಿಲ್ಲ. ಹಾಗಾಗಿ ಕೆಎಸ್ಆರ್ಟಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ” ಎಂದು ತಿಳಿಸಿದರು.
ಗೌಡರ ಗರಡಿಯಲ್ಲಿ ಬೆಳೆದಿದ್ದ ಶ್ರೀನಿವಾಸ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೂ ಕಾಂಗ್ರೆಸ್ನಲ್ಲಿ ಅವರಿಗೆ ಸ್ಥಾನಮಾನ ಸಿಗದಿದ್ದಕ್ಕೆ ಅಭಿಮಾನಿಗಳು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
