SIR deadline Extended: ಕೇಂದ್ರ ಚುನಾವಣಾ ಆಯೋಗವು ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅವಧಿಯನ್ನು ವಿಸ್ತರಿಸಿದೆ.
ಬೆಂಗಳೂರು, ಆ.8: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಅವಧಿಯನ್ನು 2ನೇ ಬಾರಿ ಕೇಂದ್ರ ಚುನಾವಣಾ ಆಯೋಗ ವಿಸ್ತರಿಸಿದೆ. ಇದಕ್ಕೂ ಮುನ್ನ ಜುಲೈ 29ರವರೆಗಿದ್ದ ಗಡುವನ್ನು ಆ.8ರವರೆಗೆ ವಿಸ್ತರಿಸಿತ್ತು. ಇದೀಗ ಮತ್ತೆ ಆ.17ರ ವರೆಗೆ ಕಾಲಾವಕಾಶ ನೀಡಿದೆ.
ರಾಜ್ಯದಲ್ಲಿ 5.54 ಕೋಟಿ ಮತದಾರರ ಪೈಕಿ 1.11 ಕೋಟಿ ಮಂದಿ ಎಎಸ್ಡಿಡಿಒ (ನಾಪತ್ತೆ, ಸ್ಥಳಾಂತರ, ಮರಣ, ದ್ವಿಪ್ರತಿ) ವಿಭಾಗದ ವ್ಯಾಪ್ತಿಗೆ ಬರಲಿದ್ದಾರೆ. ಜನಸಂಖ್ಯೆಯ ಶೇ.20ರಷ್ಟು ಮತದಾರರು ಎಸ್ಐಆರ್ ವ್ಯಾಪ್ತಿಯಿಂದ ಹೊರಗುಳಿದಿದ್ಧಾರೆ. ಬೆಂಗಳೂರು ನಗರದಲ್ಲಿ 49 ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ.
ಗಣತಿ ನಮೂನೆ ಡಿಜಿಟಲೀಕರಣ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಮತದಾರರನ್ನು ಕರಡು ಪಟ್ಟಿಯಲ್ಲಿ ನೋಂದಣಿ ಮಾಡುವ ಉದ್ದೇಶದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಆಯೋಗಕ್ಕೆ ಪತ್ರ ಬರೆದಿದ್ದರು. ಈ ಪತ್ರವನ್ನು ಆಧರಿಸಿ ಆ.17ರ ವರೆಗೆ ಎಸ್ಐಆರ್ ಗಡುವು ವಿಸ್ತರಿಸಿ ಆಯೋಗದ ಅಧೀನ ಕಾರ್ಯದರ್ಶಿ ಸಂದೀಪ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ
ಆ.17ರ ವರೆಗೆ ಗಣತಿ ನಮೂನೆ ಸ್ವೀಕಾರ ಹಾಗೂ ವಾಪಸ್ ಪ್ರಕ್ರಿಯೆ
ಆ.17ರಂದು ಮತಗಟ್ಟೆಗಳ ಮರುಹೊಂದಾಣಿಕೆ
ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ
ಆ.24ರಿಂದ ಸೆ.23ರ ವರೆಗೆ ಮತದಾರರು ಆಕ್ಷೇಪಣೆ ಸಲ್ಲಿಸಬಹುದು
ಆ.24ರಿಂದ ಅ.22ರ ವರೆಗೆ ಆಕ್ಷೇಪಣೆ ಅರ್ಜಿ ವಿಲೇವಾರಿ
ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ
