AL QUDA ATTACK: ಕೆಂಪುಕೋಟೆಯ ಬಳಿ ನಡೆದ ಭೀಕರ ಕಾರು ಬಾಂಬ್ ಸ್ಫೋಟದ ತನಿಖೆಯಲ್ಲಿ ಸ್ಫೋಟಕ ತಿರುವು ಸಿಕ್ಕಿದ್ದು, ದಾಳಿ ಹಿಂದೆ ಅಲ್-ಖೈದಾ ಕೈವಾಡವಿರುವ ಬಗ್ಗೆ ಅಧಿಕೃತವಾಗಿ ಸಾಬೀತಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿಳಿಸಿದೆ.
ನವದೆಹಲಿ, ಆ.13: ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಬಳಿ ನಡೆದ ಭೀಕರ ಕಾರು ಬಾಂಬ್ ಸ್ಫೋಟದ ತನಿಖೆಯಲ್ಲಿ ಜಾಗತಿಕ ಮಟ್ಟದ ಸ್ಫೋಟಕ ತಿರುವು ಸಿಕ್ಕಿದ್ದು, ದಾಳಿ ಹಿಂದೆ ಅಲ್-ಖೈದಾ ಕೈವಾಡದ ಕುರಿತು ಮಹತ್ವದ ಸಾಕ್ಷ್ಯ ದೊರೆತಿದೆ.
ಈ ದಾಳಿಯನ್ನು ‘ಅಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್’ ಉಗ್ರ ಸಂಘಟನೆಯೇ ನಡೆಸಿರುವುದು ಅಧಿಕೃತವಾಗಿ ಸಾಬೀತಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ತಿಳಿಸಿದೆ.
ಐಎಸ್ಐಎಲ್ (ISIL) ಮತ್ತು ಅಲ್ಖೈದಾ ಕುರಿತ 1267 ನಿರ್ಬಂಧ ಸಮಿತಿಗೆ ಸಲ್ಲಿಸಲಾದ ವಿಶ್ಲೇಷಣಾ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡದ 38ನೇ ವರದಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.
AQIS ಸಂಘಟನೆಯು ಚದುರಿದ ಉಗ್ರ ಸಂಘಟನೆಯಿಂದ ಪ್ರಾದೇಶಿಕ ಭಯೋತ್ಪಾದಕ ಸಂಘಟನೆಯಾಗಿ ತನ್ನ ಕಾರ್ಯವೈಖರಿಯನ್ನು ಬದಲಿಸಿಕೊಂಡಿದೆ ಎಂದು ವರದಿ ಹೇಳಿದೆ. ದೊಡ್ಡ ಗುಂಪುಗಳ ಬದಲಿಗೆ ಸಣ್ಣ ವಿಭಾಗಗಳ ಮೂಲಕ ಸಂಘಟನೆ ತನ್ನ ಸಾಗಣೆ ಹಾಗೂ ಹಣಕಾಸು ಜಾಲಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ ಎಂದು ತಿಳಿಸಲಾಗಿದೆ.
2025ರ ನವೆಂಬರ್ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ದಾಳಿಗೆ ಅಲ್-ಖೈದಾ ಇನ್ ದಿ ಇಂಡಿಯನ್ ಸಬ್ಕಾಂಟಿನೆಂಟ್ (AQIS) ಅನ್ನು ಅಧಿಕೃತವಾಗಿ ಹೊಣೆಗಾರರನ್ನಾಗಿ ಮಾಡಲಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.
ದೆಹಲಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಇದೂ ಒಂದಾಗಿದ್ದು, ಕೆಂಪುಕೋಟೆ ಮೆಟ್ರೋ ನಿಲ್ದಾಣದ ಸಮೀಪದ ಟ್ರಾಫಿಕ್ ಸಿಗ್ನಲ್ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಸುಮಾರು 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
