Tamilnadu CM Bumper Announcment: ಆರೋಗ್ಯ ಮತ್ತು ರೈತರ ಹಿತದೃಷ್ಟಿಯಿಂದ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಬಂಪರ್ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಶಾಸಕರಿಗೆ ಸರ್ಕಾರಿ ಕಾರು, ಮಾಸಿಕ 1 ಲಕ್ಷ ರೂ. ಭತ್ಯೆ, ಮುಖ್ಯಮಂತ್ರಿ ಆರೋಗ್ಯ ವಿಮಾ ಮಿತಿ 5 ಲಕ್ಷದಿಂದ 25 ಲಕ್ಷ ರೂ.ಗೆ ಏರಿಕೆ, ವೈದ್ಯಕೀಯ ಶಿಕ್ಷಣಕ್ಕೆ 351 ಕೋಟಿ ರೂ. ಹಾಗೂ ಹಾಲಿನ ಖರೀದಿ ದರ ಹೆಚ್ಚಳದಿಂದ ಜನರಿಗೆ ಭಾರಿ ಅನುಕೂಲವಾಗಲಿದೆ.![]()
ಚೆನ್ನೈ, ಆ.19: ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಅವರು ರಾಜ್ಯ ವಿಧಾನಸಭೆಯಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಕ್ಷೇತ್ರ ಹಾಗೂ ರೈತರ ಹಿತದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳು ಮತ್ತು ಬಂಪರ್ ಸೌಲಭ್ಯಗಳನ್ನು ಪ್ರಕಟಿಸಿದ್ದಾರೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸಂಚರಿಸಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲು ಅನುಕೂಲವಾಗುವಂತೆ ಎಲ್ಲಾ ಶಾಸಕರಿಗೆ ಸರ್ಕಾರಿ ವಾಹನಗಳು, ಮಾಸಿಕ ಭತ್ಯೆ, ಆರೋಗ್ಯ ವಿಮೆಯಲ್ಲಿ ಭಾರಿ ಏರಿಕೆ ಹಾಗೂ ಹಾಲಿನ ಖರೀದಿ ದರ ಹೆಚ್ಚಳ ಸೇರಿದಂತೆ ಹಲವು ಜನಪರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಶಾಸಕರಿಗೆ ಸರ್ಕಾರಿ ಕಾರು, 1 ಲಕ್ಷ ಮಾಸಿಕ ಭತ್ಯೆ
ತಮಿಳುನಾಡಿನ ಶಾಸಕರು ತಮ್ಮ ಮತಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಶಾಸಕರಿಗೂ ಸರ್ಕಾರಿ ವಾಹನವನ್ನು ಒದಗಿಸಲಾಗುವುದು. ವಾಹನ ನಿರ್ವಹಣೆ ಹಾಗೂ ಚಾಲಕರ ವೇತನಕ್ಕಾಗಿ ಪ್ರತಿ ತಿಂಗಳು 75 ಸಾವಿರ ರೂ. ಭತ್ಯೆ ನೀಡಲಾಗುತ್ತದೆ. ಶಾಸಕರ ಕಚೇರಿಯ ದಿನನಿತ್ಯದ ಆಡಳಿತಾತ್ಮಕ ಕೆಲಸಗಳಿಗಾಗಿ ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮಾಸಿಕ 25 ಸಾವಿರ ರೂ. ಹೆಚ್ಚುವರಿ ನೆರವು ನೀಡಲಾಗುವುದು.
ಮುಖ್ಯಮಂತ್ರಿಗಳ ಸಮಗ್ರ ಆರೋಗ್ಯ ವಿಮಾ ಯೋಜನೆಯಡಿ ನೀಡಲಾಗುತ್ತಿದ್ದ ವಾರ್ಷಿಕ ವಿಮಾ ಮೊತ್ತದ ಮಿತಿಯನ್ನು 5 ಲಕ್ಷದಿಂದ ಬರೋಬ್ಬರಿ 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಚೆನ್ನೈ, ತಿರುನಲ್ವೇಲಿ, ತೂತುಕುಡಿ, ಚೆಂಗಲ್ಪಟ್ಟು, ತಿರುವರೂರು, ಕರೂರು ಮತ್ತು ಕನ್ಯಾಕುಮಾರಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ತೃತೀಯಲಿಂಗಿಗಳಿಗೆ ಹೆಚ್ಚುವರಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನು ಈ ಯೋಜನೆಯಡಿ ಉಚಿತವಾಗಿ ನೀಡಲಾಗುವುದು.
ರಾಜ್ಯದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು 351 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಇದರಿಂದ ವಿವಿಧ ವೈದ್ಯಕೀಯ ಕೋರ್ಸ್ಗಳಲ್ಲಿ 6,098 ಹೊಸ ಸೀಟುಗಳು ಲಭ್ಯವಾಗಲಿವೆ. 660 ಬಿ.ಎಸ್ಸಿ. ನರ್ಸಿಂಗ್ ಸೀಟುಗಳು ಹಾಗೂ ಕಾಲೇಜುಗಳಲ್ಲಿ 1925 ಹೆಚ್ಚುವರಿ ಸೀಟುಗಳು. 12 ಪ್ಯಾರಾಮೆಡಿಕಲ್ ಕೋರ್ಸ್ಗಳಲ್ಲಿ 2,778 ಸೀಟುಗಳು. ವೈದ್ಯಕೀಯ (MBBS/PG) ಕೋರ್ಸ್ಗಳಲ್ಲಿ 735 ಸೀಟುಗಳು. ರಾಜ್ಯದಲ್ಲಿ 7 ಹೊಸ ಸರ್ಕಾರಿ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪೆರಂಬಲೂರಿನಲ್ಲಿ 300 ಕೋಟಿ ರೂ. ವೆಚ್ಚದಲ್ಲಿ 400 ಹಾಸಿಗೆಗಳ ಸುಸಜ್ಜಿತ ಮಲ್ಟಿ-ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗುವುದು. ಸರ್ಕಾರವು ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ಗೆ 38 ರೂ. ರಿಂದ 41ರೂ.ಗೆ ಹೆಚ್ಚಿಸಿದೆ. ಈ ನಿರ್ಧಾರದಿಂದ ರಾಜ್ಯದ 3,16 ಲಕ್ಷಕ್ಕೂ ಅಧಿಕ ಹೈನುಗಾರರಿಗೆ ನೇರ ಆರ್ಥಿಕ ಅನುಕೂಲವಾಗಲಿದ್ದು, ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ 360 ಕೋಟಿ ರೂ. ಹೆಚ್ಚುವರಿ ವೆಚ್ಚವಾಗಲಿದೆ.
